ಬೆಂಗಳೂರು: ಶಾಸಕ ಎಸ್.ಟಿ ಸೋಮಶೇಖರ್ ಬೆಂಬಲಿಗರು ಇಂದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಪಕ್ಷದ ಕಚೇರಿಯಲ್ಲಿ 15 ಮಂದಿ ಪ್ರಮುಖರು ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಸಂಜೆ 4 ಗಂಟೆ ಸುಮಾರಿಗೆ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದ್ದು, ನೆಲಮಂಗಲ ಶಾಸಕ ಶ್ರೀನಿವಾಸ್ ನೇತೃತ್ವದಲ್ಲಿ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಹಲವರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಮಾಜಿ ಕಾರ್ಪೊರೇಟರ್ ರಾಜಣ್ಣ, ಆರ್ಯ ಶ್ರೀನಿವಾಸ್, ಕುಂಬಳಗೋಡು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚಿಕ್ಕರಾಜು, ಅನಿಲ್ ಕುಮಾರ್, ಹೊಸಳ್ಳಿ ಸತೀಶ್ ಸೇರಿದಂತೆ ಹಲವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ.
ಇದನ್ನೂ ಓದಿ: ಮದ್ಯಪ್ರಿಯರಿಂದ ಸರ್ಕಾರಕ್ಕೆ ಶಾಕ್; ‘ಎಣ್ಣೆ’ ಖರೀದಿಸಲು ನಿರಾಸಕ್ತಿ!
ಸೋಮಶೇಖರ್ ಸೇರ್ಪಡೆ ಮುಂದಕ್ಕೆ?
ಶಾಸಕ ಎಸ್.ಟಿ.ಸೋಮಶೇಖರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಅವರ ಸೇರ್ಪಡೆ ಸದ್ಯಕ್ಕಿಲ್ಲ ಎಂದು ತಿಳಿದುಬಂದಿದೆ. ಶಾಸಕರ ಅಸಮಾಧಾನಕ್ಕೆ ಕಾರಣವಾಗಿದ್ದ ಇಬ್ಬರು ಮುಖಂಡರನ್ನು ಪಕ್ಷದಿಂದ ಅಮಾನತು ಮಾಡಿ ಮುನಿಸು ತಣಿಸಲು ಬಿಜೆಪಿ ಮುಂದಾಗಿತ್ತು. ಈ ಹಿನ್ನೆಲೆ ಸೋಮಶೇಖರ್ ಪಕ್ಷ ತೊರೆಯುತ್ತಿಲ್ಲ ಎನ್ನಲಾಗಿದೆ. ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಡೆಸಿದ್ದ ಅವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು.
ಇದನ್ನೂ ಓದಿ: ಕಾವೇರಿ ಕಿಚ್ಚು; ಸರ್ಕಾರದ ವಿರುದ್ಧ ಸಂಸದೆ ಸುಮಲತಾ ನೇತೃತ್ವದಲ್ಲಿಂದು ಪ್ರತಿಭಟನೆ
ಇಂದೇ ಕಾಂಗ್ರೆಸ್ ಸೇರ್ತಾರಾ ಆಯನೂರು?
ಕಾಂಗ್ರೆಸ್ ಸೇರುವುದಾಗಿ ಖಚಿತಪಡಿಸಿರುವ ಆಯನೂರು ಮಂಜುನಾಥ್ ಇಂದು ಕಾಂಗ್ರೆಸ್ ಸೇರುವ ಸಂಭವವಿದೆ. ಸಂಜೆ ನಡೆಯಲಿರುವ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಆಯನೂರು ಮಂಜುನಾಥ್ ಭಾಗಿಯಾಗಬಹುದು ಎನ್ನಲಾಗಿದೆ. ಅವರ ಜೊತೆ ಬೆಂಬಲಿಗರೂ ಕೂಡ ಕಾಂಗ್ರೆಸ್ ಸೇರ್ಪಡೆಯಾಗಬಹುದು ಎನ್ನಲಾಗ್ತಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.