ಬೆಂಗಳೂರು: ಉದ್ಯಮಿಗೆ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ವಂಚಿಸಿರುವ ಆರೋಪದ ಮೇಲೆ ಹಿಂದುತ್ವ ಸಂಘಟನೆಯ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಬಗ್ಗೆ ಕಾಂಗ್ರೆಸ್ ಪಕ್ಷ ಬಿಜೆಪಿಗೆ ಕುಟುಕಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ತನ್ನ ಆಡಳಿತದಲ್ಲಿ ಕುಮಾರಕೃಪಾ ಅತಿಥಿಗೃಹವನ್ನು ಭ್ರಷ್ಟರು, ಲಂಪಟರು, ದಗಾಕೋರರ ಅಡ್ಡೆಯಾಗಿ ಬದಲಾಯಿಸಿತ್ತೇ? ಎಂದು ಪ್ರಶ್ನಿಸಿದೆ.
ಸ್ಯಾಂಟ್ರೋ ರವಿಯೂ ವಂಚನೆಯ ಕೆಲಸಗಳಿಗೆ ಕುಮಾರಕೃಪಾವನ್ನೇ ಕಾಯಂ ಕಾರ್ಯಸ್ಥಾನ ಮಾಡಿಕೊಂಡಿದ್ದ, ಚೈನ್ ಚೈತ್ರ ಕೂಡ ಟಿಕೆಟ್ ವಂಚನೆಗೆ ಕುಮಾರಕೃಪಾವನ್ನೇ ಆಶ್ರಯಿಸಿದ್ದಳು. ಕುಮಾರಕೃಪಾ ಅತಿಥಿಗೃಹವನ್ನು ಥರ್ಡ್ ಗ್ರೇಡ್ ಲಾಡ್ಜ್‌ನಂತೆ ವ್ಯವಸ್ಥೆ ಮಾಡಿಕೊಡುವುದರ ಹಿಂದೆ ಯಾರ ಕೃಪೆ ಇತ್ತು? ಎಂದು ವಾಗ್ದಾಳಿ ನಡೆಸಿದೆ.
ಏನಿದು ಪ್ರಕರಣ?: ಚೈತ್ರಾ ಕುಂದಾಪುರ ಅವರು ಉದ್ಯಮಿಯೊಬ್ಬರಿಗೆ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ವಂಚಿಸಿರುವ ಆರೋಪದ ಮೇಲೆ ಪೊಲೀಸರು ಉಡುಪಿಯಲ್ಲಿ ವಶಕ್ಕೆ ಪಡೆದು ಸದ್ಯ ಬೆಂಗಳೂರಿಗೆ ಕರೆತಂದಿದ್ದಾರೆ.
ಇದನ್ನೂ ಓದಿ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ : ಚೈತ್ರಾ ಕುಂದಾಪುರ ಪೊಲೀಸರ ವಶಕ್ಕೆ
ಸಮಾಜ ಸೇವಕರಾಗಿ ಗುರುತಿಸಿಕೊಂಡಿರುವ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬವರು ಈ ಬಾರಿಯ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರ ಮುಗ್ಧತೆಯನ್ನು ಬಳಸಿಕೊಂಡಿದ್ದ ಚೈತ್ರಾ, ನಾಲ್ಕೈದು ಜನರ ತಂಡದ ಮೂಲಕ ನಕಲಿ ಆರೆಸ್ಸೆಸ್ ನಾಯಕರನ್ನು ಸೃಷ್ಟಿಸಿ, ಟಿಕೆಟ್ ಕೊಡಿಸುವುದಾಗಿ ನಂಬಿಸಿ ಮೂರು ಹಂತಗಳಲ್ಲಿ ಬರೋಬ್ಬರಿ ಏಳು ಕೋಟಿ ರೂಪಾಯಿ ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.