ಬೆಂಗಳೂರು: ಕರ್ನಾಟಕ- ಮಹಾರಾಷ್ಟ್ರದ ನಡುವೆ ಗಡಿಯಲ್ಲಿ ಉಂಟಾಗಿರುವ ಬೆಳವಣಿಗೆ ಕುರಿತಂತೆ ಮಾಹಿತಿ ನೀಡಲು ರಾಜ್ಯದ ಸಂಸದರ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮಹಾರಾಷ್ಟ್ರ, ಕರ್ನಾಟಕ ಎರಡು ರಾಜ್ಯಗಳ ನಡುವಿನ ಗಡಿ ವಿವಾದ ಶಮನಗೊಳಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಉಭಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಹತ್ವ ಸಭೆ ಕರೆದಿದ್ದಾರೆ ಎಂದು ಹೇಳಲಾಗಿತ್ತು. ಸುದ್ದಿಗಾರರ ಜತೆ ಮಾತನಾಡಿ, ‘ನಾನು ಸಹ ಅಮಿತ್ ಶಾ ಜತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಈ ವೇಳೆ ರಾಜ್ಯದ ವಿಚಾರ, ನಿಲುವು, ವಾಸ್ತವಾಂಶ ತಿಳಿಸಿದ್ದೇನೆ. ಈ ವೇಳೆ ಹೇಳಿ ಕಳುಹಿಸಿದಾಗ ಸಭೆಗೆ ಬರಬೇಕಾಗಬಹುದು ಎಂದಿದ್ದಾರೆ. ಇದರ ಜೊತೆಗೆ ಸಂಸದರ ನಿಯೋಗ ಕೂಡ ಸೋಮವಾರ ನವದೆಹಲಿಯಲ್ಲಿ ಗೃಹ ಸಚಿವರನ್ನು ಭೇಟಿ ಮಾಡಿ ರಾಜ್ಯದ ನಿಲುವನ್ನು ಸ್ಪಷ್ಟಪಡಿಸಲಿದೆ’ ಎಂದು ತಿಳಿಸಿದ್ದಾರೆ.
ಇನ್ನೂ ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಹಾರಾಷ್ಟ್ರದ ನಿಯೋಗ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿರುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ಈ ಹಿಂದೆಯೂ ಸಹ ಮಹಾರಾಷ್ಟ್ರ ಈ ರೀತಿಯ ಪ್ರಯತ್ನ ಮಾಡಿದೆ. ಈ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದೆ. ನ್ಯಾಯಾಲಯದಲ್ಲಿ ನಮ್ಮ ನ್ಯಾಯ ಸಮ್ಮತ ವಿಚಾರ ಗಟ್ಟಿಯಾಗಿದೆ. ಗಡಿ ವಿಚಾರದಲ್ಲಿ ನಮ್ಮ ಸರ್ಕಾರ ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
ಈ ನಡುವೆ ಸರ್ವಪಕ್ಷದ ಸಭೆ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜತೆ ಚರ್ಚಿಸಲಾಗಿದೆ. ಸಭೆ ನಿಗದಿಯಾದ ಬಳಿಕ ಹೇಳಲಾಗುವುದು ಎಂದು ತಿಳಿಸಿದರು.ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯೊಂದಿಗೆ ಡಿ.14 ಅಥವಾ 15ರಂದು ಸಭೆ ನಡೆಯಲಿದ್ದು, ನನ್ನನ್ನೂ ಸಹ ಸಭೆಗೆ ಆಹ್ವಾನಿಸಲಾಗಿದೆ. ಇದರ ಜೊತೆಗೆ ನಾನೂ ಸಹ ಖುದ್ದು ಅಮಿತ್ ಶಾ ಅವರನ್ನು ಭೇಟಿ ಮಾಡುತ್ತೇನೆ. ಈ ವೇಳೆ ಕರ್ನಾಟಕದ ನಿಲುವನ್ನು ಅವರಿಗೆ ಸ್ಪಷ್ಟಪಡಿಸಲಾಗುವುದು ಎಂದು ಹೇಳಿದರು.