ಚೆನ್ನೈ: ತಮಿಳುನಾಡು ಯುವಜನ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ (Udayanidhi Stalin), ಸನಾತನ ಧರ್ಮದ ಕುರಿತ ಹೇಳಿಕೆಯು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ‘ನಾನು ನನ್ನ ಮಾತಿಗೆ ಬದ್ಧನಾಗಿದ್ದೇನೆ ಮತ್ತು ಯಾವುದೇ ಕಾನೂನು ಸವಾಲನ್ನು ಎದುರಿಸಲು ಸಿದ್ಧ’ ಎಂದು ಬಿಜೆಪಿ ಮುಖಂಡ ಅಮಿತ್ ಮಾಳವಿಯಾ ಅವರಿಗೆ ತಿರುಗೇಟು ನೀಡಿದ್ದಾರೆ.
‘ಸನಾತನ ನಿರ್ಮೂಲನೆ’ ವಿಷಯದ ಕುರಿತು ತಮಿಳುನಾಡು ಪ್ರಗತಿಪರ ಲೇಖಕರ ಕಲಾವಿದರ ಸಂಘವು ಶನಿವಾರ ಚೆನ್ನೈನಲ್ಲಿ ಆಯೋಜಿಸಿದ್ದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (MK Stalin) ಅವರ ಪುತ್ರ ಉದಯನಿಧಿ ಸ್ಟಾಲಿನ್, ‘ಸನಾತನ ಧರ್ಮವು ಸಾಮಾಜಿಕ ನ್ಯಾಯದ ಕಲ್ಪನೆಗೆ ವಿರುದ್ಧವಾಗಿದೆ’ ಎಂದು ಹೇಳಿದ್ದರು.
‘ನನಗೆ ವಿಶೇಷ ಭಾಷಣ ಮಾಡಲು ಅವಕಾಶ ನೀಡಿದ ಈ ಸಮ್ಮೇಳನದ ಸಂಘಟಕರಿಗೆ ನಾನು ಧನ್ಯವಾದ ಹೇಳುತ್ತೇನೆ. ನೀವು ಸಮ್ಮೇಳನದ ಹೆಸರನ್ನು ‘ಸನಾತನ ವಿರೋಧಿ ಸಮಾವೇಶ’ ಎನ್ನುವುದಕ್ಕಿಂತ ‘ಸನಾತನ ನಿರ್ಮೂಲನಾ ಸಮಾವೇಶ’ ಎಂದು ಇರಿಸಿದ್ದೀರಿ, ಅದನ್ನು ನಾನು ಪ್ರಶಂಸಿಸುತ್ತೇನೆ’ ಎಂದು ಉದಯನಿಧಿ ಮಾತನಾಡಿದ್ದರು.
ಇದನ್ನೂ ಓದಿ; ‘ಒಂದು ರಾಷ್ಟ್ರ, ಒಂದು ಚುನಾವಣೆ’ ಸಮಿತಿ ಸೇರಲು ನಿರಾಕರಿಸಿದ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ
‘ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ. ಆದರೆ, ಅದನ್ನು ರದ್ದುಗೊಳಿಸಲೇಬೇಕು. ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕರೋನಾವನ್ನು ವಿರೋಧಿಸಲು ಸಾಧ್ಯವಿಲ್ಲ. ಇದನ್ನು ನಿರ್ಮೂಲನೆ ಮಾಡಬೇಕು. ಸನಾತನವನ್ನು ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಬೇಕು’ ಎಂದು ಹೇಳಿದ್ದರು.
‘ಸನಾತನ ಎಂಬ ಹೆಸರು ಸಂಸ್ಕೃತದಿಂದ ಬಂದಿದೆ. ಇದು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ’ ಎಂದು ಅವರು ತಮ್ಮ ಭಾಷಣದಲ್ಲಿ ಮಾತನಾಡಿದ್ದರು.
ತಮ್ಮ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ (Amith Malaviya) ಟ್ವೀಟ್‌ಗೆ ಪ್ರತಿಕ್ರಿಯಿಸಿದ ಉದಯನಿಧಿ, ‘ಸನಾತನ ಧರ್ಮವನ್ನು ಅನುಸರಿಸುತ್ತಿರುವ ಜನರ ನರಮೇಧಕ್ಕೆ ನಾನು ಎಂದಿಗೂ ಕರೆ ನೀಡಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.
‘ಸನಾತನ ಧರ್ಮವು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ತತ್ವವಾಗಿದೆ. ಸನಾತನ ಧರ್ಮವನ್ನು ಬೇರು ಸಮೇತ ಕಿತ್ತು ಮಾನವೀಯತೆ ಮತ್ತು ಮಾನವ ಸಮಾನತೆಯನ್ನು ಎತ್ತಿ ಹಿಡಿಯುತ್ತದೆ. ನಾನು ಹೇಳಿದ ಪ್ರತಿಯೊಂದು ಮಾತಿಗೂ ದೃಢವಾಗಿ ನಿಲ್ಲುತ್ತೇನೆ. ಸನಾತನ ಧರ್ಮದಿಂದ ಬಳಲುತ್ತಿರುವ, ತುಳಿತಕ್ಕೊಳಗಾದ ಮತ್ತು ಅಂಚಿನಲ್ಲಿರುವವರ ಪರವಾಗಿ ನಾನು ಮಾತನಾಡಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ರಾಹುಲ್‌ಗಾಗಿ ಸ್ಪೆಷಲ್ ʼಮಟನ್ʼ ರೆಸಿಪಿ ಮಾಡಿದ ಲಾಲು!
‘ಸನಾತನ ಧರ್ಮ ಮತ್ತು ಸಮಾಜದ ಮೇಲೆ ಅದರ ದುಷ್ಪರಿಣಾಮಗಳ ಬಗ್ಗೆ ಆಳವಾದ ಸಂಶೋಧನೆ ನಡೆಸಿದ ಪೆರಿಯಾರ್ ಮತ್ತು ಅಂಬೇಡ್ಕರ್ ಅವರ ವ್ಯಾಪಕ ಬರಹಗಳನ್ನು ಯಾವುದೇ ವೇದಿಕೆಯಲ್ಲಿ ಪ್ರಸ್ತುತಪಡಿಸಲು ನಾನು ಸಿದ್ಧನಿದ್ದೇನೆ. ನನ್ನ ಭಾಷಣದ ನಿರ್ಣಾಯಕ ಅಂಶವನ್ನು ನಾನು ಪುನರುಚ್ಚರಿಸುತ್ತೇನೆ, ಸೊಳ್ಳೆಗಳಿಂದ ಕೋವಿಡ್-19, ಡೆಂಗ್ಯೂ ಮತ್ತು ಮಲೇರಿಯಾದಂತಹ ರೋಗಗಳು ಹರಡುವಂತೆ, ಸನಾತನ ಧರ್ಮವು ಅನೇಕ ಸಾಮಾಜಿಕ ಅನಿಷ್ಟಗಳಿಗೆ ಕಾರಣವಾಗಿದೆ ಎಂದು ನಾನು ನಂಬುತ್ತೇನೆ’ ಎಂದು ತಮ್ಮ ಮಾತುಗಳನ್ನು ಪುರುಚ್ಚರಿಸಿದ್ದಾರೆ.
ಮಾಳವಿಯಾ ಆಕ್ಷೇಪ:
‘ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರ ಪುತ್ರ ಮತ್ತು ಡಿಎಂಕೆ ಸರ್ಕಾರದ ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ಮಲೇರಿಯಾ ಮತ್ತು ಡೆಂಗ್ಯೂಗೆ ಹೋಲಿಸಿದ್ದಾರೆ. ಅದನ್ನು ನಿರ್ಮೂಲನೆ ಮಾಡಬೇಕು ಮತ್ತು ಕೇವಲ ವಿರೋಧಿಸಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸನಾತನ ಧರ್ಮವನ್ನು ಅನುಸರಿಸುವ ಭಾರತದ 80% ಜನಸಂಖ್ಯೆಯ ನರಮೇಧಕ್ಕೆ ಅವರು ಕರೆ ನೀಡುತ್ತಿದ್ದಾರೆ. ಡಿಎಂಕೆ ‘ಆಪ್’ ಬ್ಲಾಕ್‌ನ ಪ್ರಮುಖ ಸದಸ್ಯ ಮತ್ತು ಕಾಂಗ್ರೆಸ್‌ನ ದೀರ್ಘಕಾಲದ ಮಿತ್ರ ಪಕ್ಷವಾಗಿದೆ. ಮುಂಬೈ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದ್ದು ಇದೇನಾ’ ಎಂದು ಅವರು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.