ಹಾಸನ: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿಗೆ ಬೆಂಬಲ ಸೂಚಿಸಿದ್ದಕ್ಕೆ ಪ್ರಾಮುಖ್ಯತೆ ಕೊಡುವ ಅಗತ್ಯವಿಲ್ಲ ಎಂದು ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಸುಮಲತಾ ಅಭಿವೃದ್ಧಿ ಕೆಲಸ ಮಾಡಿದ್ದರೆ ಮಂಡ್ಯ ಜಿಲ್ಲೆಯ ಜನರ ಪರವಾಗಿ ಧನ್ಯವಾದ ಹೇಳುತ್ತೇನೆ ಎಂದು ಹೇಳಿದ್ದಾರೆ. ಅವರು ದೊಡ್ಡವರು, ದೊಡ್ಡ ಪಕ್ಷಕ್ಕೆ ಸೇರುತ್ತಿದ್ದಾರೆ. ನನ್ನ ಆರೋಗ್ಯ ಸಮಸ್ಯೆ ಕಡೆಗಣಿಸಿ ಶ್ರಮಿಸುತ್ತಿದ್ದೇನೆ ಎಂದರು.
ಸ್ವಾರ್ಥಕ್ಕಾಗಿ ನನ್ನ ದೇಹ ದಂಡನೆ ಮಾಡುತ್ತಿಲ್ಲ. ಮುಖ್ಯಮಂತ್ರಿ ಆಗಬೇಕು ಎಂದು ಈ ರೀತಿ ಶ್ರಮ ವಹಿಸುತ್ತಾ ಇಲ್ಲ. ನಮ್ಮ ಮನೆಯ ಬಳಿ ಬರುವ ಬಡ ತಾಯಂದಿರ ಕಣ್ಣೀರು ನೋಡಿದ್ದೇನೆ. ಬಡವರ, ರೈತರ ಕಣ್ಣೀರು ಒರೆಸಬೇಕು ಎನ್ನುವುದೊಂದೇ ನನ್ನ ಉದ್ದೇಶ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರಗತಿ ಬಗ್ಗೆ ಭಾಷಣ ಮಾಡುತ್ತಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಕ್ಷಣ ಕ್ರಾಂತಿ ಮಾಡಿದ್ದೇವೆ ಎನ್ನುತ್ತಾರೆ. ಆದರೆ ಬಡ ಜನರ ಮಕ್ಕಳು ಶಿಕ್ಷಣ ಪಡೆಯಲು ಆಗದೆ ಪರದಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಮಂಡ್ಯ ಸಂಸದೆ ಸುಮಲತಾ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ಹೀಗಾಗಿ ಬಿಜೆಪಿಗೆ ಬೆಂಬಲ ಘೋಷಿಸಿದ್ದು ನಮಗೆ ಸಂಬಂಧಿಸಿದ ವಿಚಾರವಲ್ಲ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲ ಪ್ರತಿಕ್ರಿಯಿಸಿದ್ದಾರೆ.