ಮಂಡ್ಯ : ಸರ್ಕಾರವನ್ನೇ ಎದುರು ಹಾಕಿಕೊಂಡು ನಾನು ಚುನಾವಣೆಯಲ್ಲಿ ಗೆದ್ದಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ರಾಜಕೀಯ ಪ್ರವೇಶಿಸಿ 4 ವರ್ಷ ಆಗಿದೆ , ರಾಜಕೀಯ ನನ್ನ ಸ್ವಾರ್ಥವಲ್ಲ , ಯಾವ ರೀತಿ ನನ್ನ ಹೆಸರು ಬಳಸಿಕೊಂಡು ಟಾರ್ಗೇಟ್ ಮಾಡಿದ್ದಾರೆ ಅನ್ನೋದು ನಂಗೆ ಗೊತ್ತಿದೆ ಎಂದು ತಮ್ಮ ನೋವು ಹಂಚಿಕೊಂಡರು.
ನನಗೆ ಪ್ರತಿಯೊಂದರಲ್ಲೂ ಅವಮಾನವೇ ಆಯಿತು, ಜನರು ನನ್ನ ಮೇಲೆ ನಂಬಿಕೆ ಇಟ್ಟಿದ್ರು, ಹಾಗಾಗಿ ಗೆದ್ದೆ,ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಮಂಡ್ಯದಲ್ಲಿ ಯಾವ ರೀತಿ ನೋಡಿದ್ರೂ ಗೊತ್ತಿದೆ, ನನ್ನ ವೆಚ್ಚದಲ್ಲಿ ಆಫೀಸ್ ನಡೆಸ್ತಾ ಇದ್ದೇನೆ, ಅವಾಚ್ಯ ಶಬ್ದಗಳಿಂದ ನನ್ನನ್ನು ನಿಂದಿಸಿದ್ರು ,ನಾನು ಯಾವುದಕ್ಕೂ ಹೆದರಲಿಲ್ಲ , ಎಂಪಿ ಅನ್ನೋದು ಇರಲಿ, ಒಂದು ಹೆಣ್ಣು ಅಂತಾನೂ ಗೌರವಿಸಿಲ್ಲ ಎಂದು ಕೊಂಚ ಭಾವುಕರಾದರು.
ನಾನು ಮನಸ್ಸು ಮಾಡದಿದ್ರೆ ಮೈ ಶುಗರ್ ಆರಂಭ ಆಗ್ತಾ ಇರಲಿಲ್ಲ,ಮಂಡ್ಯದ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಅಭಿವೃದ್ಧಿ ಆಗ್ತಿದೆ, ಮಂಡ್ಯ ಜಿಲ್ಲೆಗೆ ಮಹಾರಾಜರು ಕೊಡುಗೆ ಕೊಟ್ಟಿದ್ದಾರೆ. ಕನ್ನಂಬಾಡಿ ಇಲ್ಲಾಂದ್ರೆ ಮಂಡ್ಯ ಜಿಲ್ಲೆ ಇಲ್ಲ, ಮಂಡ್ಯ ಜಿಲ್ಲೆಯನ್ನು ನಾವು ಕಾಪಾಡಿಕೊಳ್ಳಬೇಕು, ಮಂಡ್ಯದಲ್ಲಿ ಚುನಾವಣಾ ರಾಜಕೀಯ ಮಾಡಿದ್ರೆ ಹೇಗೇ ? ಬರೀ ರಾಜಕಾರಣನಾ? ಅಭಿವೃದ್ಧಿ ಬೇಡ್ವಾ ಎಂದು ಎಂದು ದಳಪತಿಗಳಿಗೆ ಟಾಂಗ್ ನೀಡಿದರು.
ಮಂಡ್ಯದಲ್ಲಿನ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ , ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಡಿದೆ, ಕೊರೊನಾ ವೇಳೆ ಫಂಡ್ ಇರಲಿಲ್ಲ, ನನ್ನ ಸಂಬಳದಿಂದ ನಾನು ಹಣ ಕೊಟ್ಟೆ , ಎಲೆಕ್ಟ್ರೀಕ್ ವಾಹನದ ವ್ಯವಸ್ಥೆ, 26 ಶುದ್ಧ ಕುಡಿಯುವ ನೀರಿನ ಘಟಕ ಸೇರಿ ಹಲವು ಕೆಲಸಗಳನ್ನು ಮಾಡಿದ್ದೇನೆ , ಕೆಲಸ ಮಾಡೋದು ನನ್ನ ಕರ್ತವ್ಯ ಕ್ರೆಡಿಟ್ ಇನ್ಯಾರೋ ತೆಗೋತಾರೆ ಎಂದರು.
ಜೆಡಿಎಸ್ ಭದ್ರಕೋಟೆ ಅಂತೀರಾ ? ಈ ಭದ್ರ ಕೋಟೆಗೆ ಏನು ಮಾಡಿದ್ದೀರಾ ? ಮಂಡ್ಯ ಜಿಲ್ಲೆಗೆ ಜೆಡಿಎಸ್ ಕೊಡುಗೆ ಏನು ? ಅಂತಾ ಪ್ರಶ್ನಿಸುವ ಸಮಯ ಬಂದಿದೆ , ಜಿಲ್ಲೆಯಲ್ಲಿ ಕೆಲಸ ಮಾಡಲು ಆಸಕ್ತಿ ಇರಬೇಕು ಇಷ್ಟು ಪವರ್ ಇಟ್ಕೊಂಡು ಏನ್ ಮಾಡ್ತಿದ್ದೀರಾ? ಈಗ ಕೆಲಸ ಇಲ್ಲ ಒಬ್ಬರಿಗೊಬ್ಬರು ಮಾತಾಡುತ್ತಾರೆ ಎಂದು ಗರಂ ಆದರು.
ಮತದಾರರಿಗೆ ದುಡ್ಡು ಕೊಡೋದು.. ಇನ್ನು ಏನೊ ಹಂಚೋದು ರಾಜಕೀಯದಲ್ಲಿ ಏನೇನು ನಡೆಯುತ್ತಿದೆ ಅಂತಾ ಎಲ್ಲ ಗೊತ್ತಿದೆ, 4 ವರ್ಷದಲ್ಲಿ ನಾನು ಇದನ್ನೆಲ್ಲ ನೋಡಿದ್ದೇನೆ, ದುಡ್ಡು ಹಂಚೋದಿಕ್ಕೆ ಇವರಿಗೆ ದುಡ್ಡು ಎಲ್ಲಿಂದ ಬರುತ್ತೆ ಎಂದು ಪ್ರಶ್ನಿಸಿದರು. ದೇಶದಲ್ಲಿ ಅಭಿವೃದ್ಧಿ ಆಗ್ತಿರೋದು ನರೇಂದ್ರ ಮೋದಿಯವರಿಂದ, ನನಗೆ ನೆರವಾದವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದರು.
ಸುಮಾರು ನಾಯಕರು ಪಕ್ಷಕ್ಕೆ ಕರೆದಿದ್ದಾರೆ, ನೀವು ನಮ್ಮ ಪಕ್ಷಕ್ಕೆ ಬಂದರೆ ಬಲ ಬಂದಂತಾಗುತ್ತದೆ ಎಂದಿದ್ದಾರೆ, ಈ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗಿದೆ. ಕುಟುಂಬ ರಾಜಕೀಯ ನಾವು ಮಾಡೋದಿಲ್ಲ, ಅಭಿಷೇಕ್ ಅಂಬರೀಷ್ ರಾಜಕೀಯಕ್ಕೆ ಬರೋದಿಲ್ಲ , ಮೋದಿಯವರ ನಾಯಕತ್ವದಲ್ಲಿ ದೇಶ ಸಾಗ್ತಾ ಇದೆ, ನನ್ನ ಬೆಂಬಲ ಯಾವತ್ತಿಗೂ ಮೋದಿ ಸರ್ಕಾರಕ್ಕೆ ಎಂದು ಈ ವೇಳೆ ಸ್ಪಷ್ಟಪಡಿಸಿದರು.