ಅಹಮದಾಬಾದ್ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ.
ವಿಚಾರಣೆ ತಡೆ ನೀಡಲು ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್ ಆದೇಶದ ವಿರುದ್ಧ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್‌ವಿಎನ್ ಭಟ್ಟಿ ಅವರಿದ್ದ ಪೀಠ, ಪ್ರಕರಣದ ಅರ್ಜಿ ವಿಚಾರಣೆ ಗುಜರಾತ್ ಹೈಕೋರ್ಟ್ ನಲ್ಲಿ ಬಾಕಿ ಇದೆ. ಆಗಸ್ಟ್ 29ರಂದು ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಹಾಗಿರುವಾಗ ವಿಚಾರಣೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಪ್ರಧಾನಿ ಮೋದಿಯ ಪದವಿಯ ಬಗ್ಗೆ ಮಾಹಿತಿ ನೀಡುವಂತೆ ಆರ್‌ಟಿಐ ಕಾಯ್ದೆಯಡಿ ಅರವಿಂದ್ ಕೇಜ್ರಿವಾಲ್ ಗುಜರಾತ್ ವಿಶ್ವ ವಿದ್ಯಾನಿಲಯಕ್ಕೆ ಸಲ್ಲಿಸಿದ್ದರು. ಆದರೆ ಮಾಹಿತಿ ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿತ್ತು. ಈ ಸಂಬಂಧ ಹೇಳಿಕೆ ನೀಡಿದ್ದ ಕೇಜ್ರಿವಾಲ್, ‘ಮೋದಿ ನಿಜವಾಗಿಯೂ ಗುಜರಾತ್ ವಿವಿಯಲ್ಲಿ ಪದವಿ ಪಡೆದಿದ್ದರೆ, ಅದರ ಮಾಹಿತಿ ಯಾಕೆ ನೀಡುತ್ತಿಲ್ಲ?. ಯಾಕೆಂದರೆ ಅದು ನಕಲಿ. ಗುಜರಾತ್ ಮತ್ತು ದೆಹಲಿ ವಿವಿಗಳು ಪ್ರಧಾನಿ ವ್ಯಾಸಂಗ ಮಾಡಿದ್ದರೆ, ನಮ್ಮ ಹಳೆಯ ವಿದ್ಯಾರ್ಥಿ ಪ್ರಧಾನಿಯಾಗಿದ್ದಾರೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದವು ಎಂದು ಕೇಜ್ರಿವಾಲ್ ಹೇಳಿದ್ದರು.
ಈ ಸಂಬಂಧ ಗುಜರಾತ್ ವಿವಿಯ ರಿಜಿಸ್ಟ್ರಾರ್ ಪಿಯೂಷ್ ಪಟೇಲ್ ಕೇಜ್ರಿವಾಲ್ ಮತ್ತು ಎಎಪಿ ನಾಯಕ ಸಂಜಯ್ ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಈ ಪ್ರಕರಣದ ವಿಚಾರಣೆಗೆ ತಡೆ ನೀಡುವಂತೆ ಕೇಜ್ರಿವಾಲ್ ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಆಗಸ್ಟ್ 11ರಂದು ಕೇಜ್ರಿವಾಲ್ ಮತ್ತು ಸಂಜಯ್ ಸಿಂಗ್ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಿಚಾರಣೆಗೆ ತಡೆ ನೀಡಲು ನಿರಾಕರಿಸಿತ್ತು. ಈ ಹಿನ್ನೆಲೆ ಕೇಜ್ರಿವಾಲ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.