ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ತೀರ್ಪನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಪೀಠವು ಸತತ 16 ದಿನಗಳ ವಿಚಾರಣೆಯ ನಂತರ ತೀರ್ಪನ್ನು ಕಾಯ್ದಿರಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿಆರ್ ಗವಾಯಿ ಮತ್ತು ಸೂರ್ಯ ಕಾಂತ್ ಅವರನ್ನೊಳಗೊಂಡ ಪೀಠವು, ವಿಚಾರಣೆಯ ಕೊನೆಯ ದಿನವಾದ ಇಂದು ಹಿರಿಯ ವಕೀಲರಾದ ಕಪಿಲ್ ಸಿಬಲ್, ಗೋಪಾಲ್ ಸುಬ್ರಮಣಿಯಂ, ರಾಜೀವ್ ಧವನ್, ಜಾಫರ್ ಶಾ, ದುಷ್ಯಂತ್ ದವೆ ಮತ್ತು ಇತರರ ವಾದವನ್ನು ಮರು ಆಲಿಸಿತು.
ಇದನ್ನೂ ಓದಿ: ‘ಒಕ್ಕೂಟಕ್ಕೆ ‘ಭಾರತ್’ ಎಂದು ಹೆಸರಿಟ್ಟರೆ ಅವರು ದೇಶಕ್ಕೆ ‘ಬಿಜೆಪಿ’ ಎನ್ನುತ್ತಾರೆಯೇ?’
ಅರ್ಜಿದಾರರು ಅಥವಾ ಪ್ರತಿವಾದಿಗಳ ಪರ ಹಾಜರಾಗುವ ಯಾವುದೇ ವಕೀಲರು ಲಿಖಿತ ಸಲ್ಲಿಕೆಯನ್ನು ಸಲ್ಲಿಸಲು ಬಯಸಿದರೆ ಮುಂದಿನ 3 ದಿನಗಳಲ್ಲಿ ಮಾಡಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಸಲ್ಲಿಕೆ ಎರಡು ಪುಟಗಳನ್ನು ಮೀರಿ ವಿಸ್ತರಿಸಬಾರದು ಎಂದು ಷರತ್ತು ವಿಧಿಸಿದೆ.
ಆಗಸ್ಟ್ 5, 2019 ರಂದು ಕೇಂದ್ರ ಸರ್ಕಾರ ತೆಗೆದುಕೊಂಡಿದ್ದ ಆರ್ಟಿಕಲ್ 370 ರದ್ದು ನಿರ್ಧಾರವು ಅಸಂವಿಧಾನಿಕ ಎಂದು ಆರೋಪಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅಲ್ಲದೆ ಜಮ್ಮು ಮತ್ತು ಕಾಶ್ಮೀರಕ್ಕೆ ಪೂರ್ಣ ರಾಜ್ಯದ ಸ್ಥಾನಮಾನ ನೀಡಬೇಕು ಎಂದು ವಾದಿಸಲಾಗಿತ್ತು. ಹೀಗಾಗಿ ಕಳೆದ ನಾಲ್ಕೈದು ವರ್ಷದಲ್ಲಿ ಸಲ್ಲಿಕೆಯಾದ ಎಲ್ಲಾ ಅರ್ಜಿಗಳನ್ನು ಒಟ್ಟುಗೂಡಿಸಿ ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ.
ಇದನ್ನೂ ಓದಿ: ‘ಭಾರತ’ ಎಂಬ ಹೆಸರು ಬಂದಿದ್ದು ಹೇಗೆ? ಇಲ್ಲಿದೆ ನೋಡಿ ಅಸಲಿ ಕಥೆ
ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಅನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ 370ನೇ ವಿಧಿ ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆ, 2019 ರ ರದ್ದತಿಯನ್ನು ಪ್ರಶ್ನಿಸುವ ಹಲವಾರು ಅರ್ಜಿಗಳ ವಿಚಾರಣೆ ಅಂತ್ಯಗೊಂಡಿದ್ದು, ತೀರ್ಪು ಕಾಯ್ದಿರಿಸಲಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.