ಉಡುಪಿ: ಚೆನ್ನಗಿರಿ ಶಾಸಕ ವಿರೂಪಾಕ್ಷಪ್ಪನನ್ನು ಬಂಧಿಸಬೇಕು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ಕೊಡಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಒತ್ತಾಯಿಸಿದರು.
ಬೊಮ್ಮಾಯಿ ಸರ್ಕಾರದ ಭ್ರಷ್ಟಾಚಾರ ವಿಶ್ವವಿಖ್ಯಾತಿಯನ್ನು ಪಡೆದಿದೆ. ಬೊಮ್ಮಾಯಿ ಮೂಗಿನ ಕೆಳಗೆ ನಡೆದ ಭ್ರಷ್ಟಾಚಾರ ಬಯಲಾಗಿದೆ. ಭ್ರಷ್ಟಾಚಾರದ ಹಣದಲ್ಲಿ ಯಾರಿಗೆಲ್ಲ ಪಾಲು ಇದೆ ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಬೇಕು.ರಾಜ್ಯದಲ್ಲಿ ಲೂಟಿ ಹೊಡೆದ ಹಣಕ್ಕೆ ಯಾರು ಜವಾಬ್ದಾರಿ? ಎಂದು ಪ್ರಶ್ನಿಸಿದ್ದಾರೆ
ಲೂಟಿ ಹೊಡೆದ ಹಣದಲ್ಲಿ ಬಸವರಾಜ ಬೊಮ್ಮಾಯಿ, ಮಂತ್ರಿಗಳಿಗೆ ಎಷ್ಟು ಪಾಲು ಇದೆ? ಕೈಗಾರಿಕಾ ಸಚಿವ ನಿರಾಣಿಯ ತಲೆದಂಡ ಆಗಿಲ್ಲ ಯಾಕೆ? ಕೆಎಸ್‌ಡಿಎಲ್ ಅಧ್ಯಕ್ಷ ಶಾಸಕ ವಿರೂಪಾಕ್ಷಪ್ಪ ತಲೆಮರೆಸಿಕೊಳ್ಳಲು ಬಿಟ್ಟಿದ್ಯಾಕೆ?
ಪುತ್ರನ ಮನೆಯಲ್ಲಿ 40 ಲಕ್ಷ ರೂಪಾಯಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿದೆ. 24 ಗಂಟೆ ಒಳಗೆ ಮನೆಯಲ್ಲಿ 6 ಕೋಟಿ ರೂಪಾಯಿ ಪತ್ತೆಯಾಗಿದೆ. ಶಾಸಕ ವಿರುಪಾಕ್ಷಪ್ಪ ಎಲ್ಲಿ ತಲೆಮರಸಿಕೊಂಡಿದ್ದಾರೆ? ಈ ಭ್ರಷ್ಟಾಚಾರದಲ್ಲಿ ಬಸವರಾಜ ಬೊಮ್ಮಾಯಿ ಪಾತ್ರ ಏನು? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೌನ ಇರುವುದು ಯಾಕೆ? ಎಂದು ಪ್ರಶ್ನಿಸಿದರು.