ಹಾವೇರಿ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಂಬಂಧ ಜ.12ರ ಒಳಗೆ ಆದೇಶ ಹೊರಡಿಸದಿದ್ದರೆ ಮತ್ತೆ ಹೋರಾಟ ನಡೆಸುತ್ತೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, 2D ಮತ್ತು 2Cಗೆ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದ್ದೇವೆ ಎಂದು ಸರ್ಕಾರ ಹೇಳಿತು. ಆಗ ಜನರಿಗೆ ನಾವೇನು ಉತ್ತರ ಕೊಡಬೇಕು ಎಂದು ಸುಮ್ಮನೆ ಕುಳಿತೆವು, ಸಿಎಂ ಮನೆ ಮುಂದೆಯೇ ಸಂಕ್ರಾಂತಿ ಆಚರಿಸಿ ಪ್ರತಿಭಟಿಸುತ್ತೇವೆ ಎಂದು ಹೇಳಿದ್ದಾರೆ. ಚೆನ್ನಮ್ಮ ಮೂರ್ತಿಯಿಂದ ಸಿಎಂ ಮನೆಯವರೆಗೆ ಹೋರಾಟ ಮಾಡುತ್ತೇವೆ. ಸಿಎಂ ಅವರ ಜೊತೆಗಿನ ಚರ್ಚೆ, ಮಾತು ಕೊಟ್ಟು ತಪ್ಪಿರುವ ಬಗ್ಗೆಯೂ ಚರ್ಚೆ ಆಗಲಿದೆ ಎಂದು ತಿಳಿಸಿದ್ದಾರೆ.
ಹೋರಾಟಕ್ಕೆ ನ್ಯಾಯ ಪಡೆದುಕೊಂಡು ಸಂಕ್ರಾಂತಿಯ ಎಳ್ಳು-ಬೆಲ್ಲ ತಿನ್ನೋಣ. ಮೀಸಲಾತಿಯ ಆದೇಶ ಪ್ರತಿ ನಮ್ಮ ಕೈಗೆ ಸಿಗೋವರೆಗೂ ನಾವು ಹೋರಾಡುತ್ತೇವೆ. ಸಿಎಂ ಮನೆ ಮುಂದೆಯೇ ನಾವೆಲ್ಲರೂ ಸಂಕ್ರಾಂತಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಜ.12ರ ಒಳಗಾಗಿ ಗೆಜೆಟ್ ಅಥವಾ ಆದೇಶ ಹೊರಡಿಸದಿದ್ದರೆ ಮತ್ತೆ ಹೋರಾಟ ಶುರುವಾಗುತ್ತದೆ. 13 ರಂದು ಸಿಎಂ ಬಸವರಾಜ ಬೊಮ್ಮಾಯಿ ಮನೆಯ ಮುಂದೆ ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದು ಹೇಳಿದ್ದಾರೆ.