ಚೆನ್ನೈ : ನಮಗೆ ಕರ್ನಾಟಕದಿಂದ ಹೆಚ್ಚುವರಿ ನೀರು ಬೇಡ. ನಮ್ಮ ಪಾಲಿನ ನೀರನ್ನು ನಮಗೆ ಕೊಡಿ. ಕರ್ನಾಟಕ ನೆಲದ ಕಾನೂನನ್ನು ಪಾಲನೆ ಮಾಡಬೇಕು. ಡಿಕೆ ಶಿವಕುಮಾರ್ ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಕಿಡಿ ಕಾರಿದ್ದಾರೆ.
ಬುಧವಾರವಷ್ಟೇ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ರಾಜ್ಯ ಸರ್ಕಾರ ಕರೆದಿದ್ದ ತುರ್ತು ಸರ್ವಪಕ್ಷ ಸಭೆಯ ಬಳಿಕ, ನೀರು ಹಂಚಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಸುಪ್ರೀಂಕೋರ್ಟ್ ನಮ್ಮ ರಾಜ್ಯದ ಪರವಾಗಿರುವ ವಾದವನ್ನು ಕೂಲಂಕುಷವಾಗಿ ಆಲಿಸುವ ಮೂಲಕ ನಮ್ಮ ರಾಜ್ಯಕ್ಕೆ ಪೂರಕವಾದ ತೀರ್ಪನ್ನು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ : ಕಾವೇರಿ ವಿವಾದದಲ್ಲಿ ಪ್ರಧಾನಿಯನ್ನು ಎಳೆಯೋದು ಬೇಡ: ಪ್ರತಾಪ್ ಸಿಂಹ
2018ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವು ತನ್ನ ತೀರ್ಪನ್ನು ಸ್ಪಷ್ಟವಾಗಿ ನೀಡಿದೆ. ಕರ್ನಾಟಕದವರು ಇದರ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಿ. ಈಗ ನಮ್ಮ ರೈತರು ಡೆಲ್ಟಾ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈಗಾಗಲೇ ‘ಕುರುವೈ’ ಕಟಾವು ಪ್ರಾರಂಭವಾಗಿದೆ ಎಂದು ತಿಳಿಸಿದರು.
ಇದರಲ್ಲಿ ಸಾಮಾನ್ಯ ನ್ಯಾಯವೂ ಕೂಡಿದೆ. ನಮಗೆ ಹೆಚ್ಚಿನ ನೀರನ್ನು ಬಿಡುವುದು ಬೇಡ, ನಮ್ಮ ಪಾಲಿನ ನೀರಷ್ಟೇ ಬೇಕು. ಕಾಂಗ್ರೆಸ್ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಒಂದು ಹನಿ ನೀರನ್ನೂ ಸಹ ಬಿಡುವುದಿಲ್ಲ, ಮೇಕೆದಾಟು ಆಣೆಕಟ್ಟನ್ನು ನಿರ್ಮಿಸುತ್ತೇವೆಂದು ಡಿಕೆ ಶಿವಕುಮಾರ್ ಹೇಳುತ್ತಾರೆ. ಇದರಲ್ಲಿ ಬಹಳಷ್ಟು ರಾಜಕೀಯ ನಡೆಯುತ್ತಿದೆ ಎಂದು ದೂರಿದರು.
ನನಗೆ ವಿಶ್ವಾಸವಿದೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಹೇಳಿದ್ದಕ್ಕೆ ಸುಪ್ರೀಂಕೋರ್ಟ್ ಒಪ್ಪುತ್ತದೆ. ಅಲ್ಲದೆ ತಮಿಳುನಾಡಿಗೆ ಅವಶ್ಯವಿರುವ ನೀರು ಬಿಡಲು ಸೂಚಿಸುತ್ತದೆ ಎಂದು ಅಣ್ಣಾಮಲೈ ಹೇಳಿದರು.
ಇದನ್ನೂ ಓದಿ : I.N.D.I.A ಒಕ್ಕೂಟ ಸಮನ್ವಯ ಸಮಿತಿಯ ಮೊದಲ ಸಭೆ ಯಶಸ್ವಿ; ಸೀಟು ಹಂಚಿಕೆ ಚರ್ಚೆ
ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹೇಳಿದ್ದೇನು..?
ಒಂದು ಕಡೆ ಮಳೆಯ ಸುಳಿವಿಲ್ಲ, ಕ್ಷಾಮ ಆವರಿಸುತ್ತಿದೆ, ಜಲಾಶಯಗಳಲ್ಲೂ ನೀರಿನ ಸಂಗ್ರಹ ಮಟ್ಟ ಗಣನೀಯವಾಗಿ ಕುಸಿದಿದೆ. ಈ ಹೊತ್ತಲ್ಲೇ ಗಾಯದ ಮೇಲೆ ಬರೆ ಎಳೆಯುವ ರೀತಿ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ (CWRC) ಕರುನಾಡಿಗೆ ಬಿಗ್ ಶಾಕ್ ನೀಡಿದೆ. ಕರ್ನಾಟಕ (Karnataka) ವಾಸ್ತವ ವರದಿಯನ್ನು ಮನವರಿಕೆ ಮಾಡಿಕೊಟ್ಟಿದ್ದರೂ, ತಮಿಳುನಾಡು (Tamil Nadu) ವಾದಕ್ಕೆ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಮಣೆ ಹಾಕಿದೆ. ಮುಂದಿನ 15 ದಿನಗಳ ಕಾಲ ನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ನಮ್ಮ ಬೆಳೆಗಳು ಒಣಗುತ್ತಿವೆ. ಕಳೆದ ಬಾರಿ ಆದೇಶದಂತೆ ನಿತ್ಯ 5000 ಕ್ಯೂಸೆಕ್ ನೀರು ಬಿಡಬೇಕಿತ್ತು. ಆದರೆ ಕರ್ನಾಟಕ ನಿತ್ಯ 3000-3400 ಕ್ಯೂಸೆಕ್ ಬಿಡುಗಡೆ ಮಾಡಿದೆ. 36.76 ಟಿಎಂಸಿ ಬಿಡುಗಡೆ ಬಾಕಿ ಉಳಿಸಿಕೊಂಡಿದೆ ಎಂದು ತಮಿಳುನಾಡು ವಾದ ಮಂಡಿಸಿತ್ತು. ಕರ್ನಾಟಕ ವಾಸ್ತವ ಪರಿಸ್ಥಿತಿ ವಿವರಿಸಿದರೂ ಕೂಡ ತಮಿಳುನಾಡು ವಾದಕ್ಕೆ ಸಮಿತಿ ಮನ್ನಣೆ ನೀಡಿದೆ. ನಿತ್ಯ 5000 ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.