ಹೈದರಾಬಾದ್: ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳ ಮುಂದಿಟ್ಟು ಅಧಿಕಾರಕ್ಕೆ ಬಂದ ಬಳಿಕ ಇತರೆ ರಾಜ್ಯದಲ್ಲಿ ಗ್ಯಾರಂಟಿ ಚರ್ಚೆ ಜೋರಾಗಿದೆ. ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆ ತೆಲಂಗಾಣದಲ್ಲೂ ಕಾಂಗ್ರೆಸ್ ಗ್ಯಾರಂಟಿಗಳ ಘೋಷಣೆ ಮಾಡಿದ್ದು, ಈ ಬಾರಿ ಅಧಿಕಾರಕ್ಕೇರುವ ವಿಶ್ವಾಸ ಹೊಂದಿದೆ. ಇಂದು ನಡೆದ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರು ಬರೋಬ್ಬರಿ 6 ಗ್ಯಾರಂಟಿಗಳ ಘೋಷಿಸಿದ್ದು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿದ್ದಾರೆ.
ರಂಗಾರೆಡ್ಡಿ ಜಿಲ್ಲೆಯ ತುಕ್ಕುಗುಡದಲ್ಲಿ ನಡೆದ ಕಾಂಗ್ರೆಸ್ ‘ವಿಜಯಭೇರಿ’ ಸಭೆಯಲ್ಲಿ ಭರ್ಜರಿ ಘೋಷಣೆಗಳು ಹೊರಬಿದ್ದಿವೆ. ಮಹಾಲಕ್ಷ್ಮಿ ಯೋಜನೆ, ರೈತ ಭರವಸೆ, ಇಂದಿರಮ್ಮ ಮನೆ ಯೋಜನೆ, ಗೃಹ ಜ್ಯೋತಿ, ಯುವ ವಿಕಾಸ, ಚೇಯುತ ಯೋಜನೆಗಳ ಜಾರಿ ಮಾಡುವುದಾಗಿ ಭರವಸೆ ನೀಡಿದೆ.
ಇದನ್ನೂ ಓದಿ: ‘2024ರಲ್ಲಿ ಬಿಜೆಪಿಯ ಅಧಿಕಾರದಿಂದ ಹೊರಗಿಡುವುದೇ ಗಾಂಧೀಜಿಗೆ ನೀಡುವ ನಿಜವಾದ ಗೌರವ’
ಮಹಾಲಕ್ಷ್ಮಿ ಯೋಜನೆ ಮೂಲಕ ಮಹಿಳೆಯರಿಗೆ ಮಾಸಿಕ 2,500 ರೂ. ಸಹಾಯಧನ, ಬಡ ಮಹಿಳೆಯರಿಗೆ ಕೇವಲ ₹500ಗೆ ಅಡುಗೆ ಅನಿಲ ಸಿಲಿಂಡರ್ ಹಾಗೂ ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿದೆ.
ರೈತ ಭರವಸೆ ಯೋಜನೆಯಲ್ಲಿ ಪ್ರತಿ ವರ್ಷ ರೈತರಿಗೆ 15 ಸಾವಿರ ರೂ. ಸಹಾಯಧನ, ಕೃಷಿ ಕಾರ್ಮಿಕರಿಗೆ ವರ್ಷಕ್ಕೆ 12 ಸಾವಿರ ರೂ. ಹಾಗೂ ಭತ್ತಕ್ಕೆ ಪ್ರತಿ ಕ್ವಿಂಟಾಲ್‌ಗೆ 500 ರೂ. ಬೋನಸ್ ನೀಡಲಾಗುವುದು ಎಂದಿದ್ದಾರೆ.


ಮೂರನೇ ಗ್ಯಾರಂಟಿಯಾದ ಇಂದಿರಮ್ಮ ಮನೆ ಯೋಜನೆಯಡಿಯಲ್ಲಿ ವಸತಿ ರಹಿತರಿಗೆ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಸಹಾಯಧನ ಹಾಗೂ ತೆಲಂಗಾಣ ವಿಮೋಚನಾ ಚಳವಳಿಯಲ್ಲಿ ಭಾಗಿಯಾದ ಕಾರ್ಯಕರ್ತರಿಗೆ 250 ಚ.ಅಡಿ ಮನೆ ಜಾಗ.
ನಾಲ್ಕನೇ ಗ್ಯಾರಂಟಿಯಾದ ಗೃಹಜ್ಯೋತಿ ಯೋಜನೆಯಲ್ಲಿ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಲಾಗಿದೆ.
ಇದನ್ನೂ ಓದಿ: 168 ಇಲಿ ಹಿಡಿಯಲು 69 ಲಕ್ಷ ರೂ. ಖರ್ಚು ಮಾಡಿದ ರೈಲ್ವೆ: ಇಡಿ, ಸಿಬಿಐ ಎಲ್ಲಿದೆ? ಎಂದ ಎಎಪಿ ಸಂಸದ
5ನೇ ಗ್ಯಾರಂಟಿಯಾದ ಯುವ ವಿಕಾಸ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ 5 ಲಕ್ಷ ರೂಪಾಯಿವರೆಗೂ ಆರ್ಥಿಕ ನೆರವು. ಎಲ್ಲಾ ಮಂಡಲದಲ್ಲೂ ತೆಲಂಗಾಣ ಇಂಟರ್‌ನ್ಯಾಷನಲ್ ಸ್ಕೂಲ್ ಸ್ಥಾಪನೆ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ.
ಇತ್ತ ಕೊನೆಯ ಹಾಗೂ 6ನೇ ಗ್ಯಾರಂಟಿಯಾದ ಚೇಯುತ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ 4 ಸಾವಿರ ರೂಪಾಯಿ ಪಿಂಚಣಿ ಹಾಗೂ ರಾಜೀವ್ ಆರೋಗ್ಯ ಶ್ರೀ ವಿಮಾ ಯೋಜನೆ ಅಡಿ 10 ಲಕ್ಷ ರೂ.ವರೆಗೂ ನೆರವು ನೀಡುವುದಾಗಿ ಕಾಂಗ್ರೆಸ್ ಘೋಷಣೆ ಮಾಡಿದೆ.
ಈ ಗ್ಯಾರಂಟಿ ಯೋಜನೆಗಳ ಹೊರತುಪಡಿಸಿ ಮತ್ತಷ್ಟು ಯೋಜನೆಗಳನ್ನು ಜಾರಿ ಮಾಡುವ ಸೂಚನೆ ನೀಡಿದ್ದು, ಪ್ರಣಾಳಿಕೆಯಲ್ಲಿ ಭಾರೀ ಆಫರ್ ಘೋಷಿಸಲಿದೆಯಂತೆ. ಪ್ರಮುಖವಾಗಿ ಮಹಿಳಾ ಸಬಲೀಕರಣಕ್ಕಾಗಿ ವಿಶೇಷ ನಿಧಿ, ರೈತರ ಸಾಲ ಮನ್ನ ಸೇರಿದಂತೆ ಹತ್ತಾರು ಯೋಜನೆಗಳ ಘೋಷಣೆ ಮಾಡಲಿದೆ ಎನ್ನಲಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.