ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನೆಲೆ ಒಟ್ಟು 2,898 ನಾಮಪತ್ರ ಸಲ್ಲಿಕೆಯಾಗಿದ್ದು, ಇದರಲ್ಲಿ 608 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಹೀಗಾಗಿ ಕಣದಲ್ಲೀಗ 2,290 ಅಭ್ಯರ್ಥಿಗಳಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ.
ಬಿಆರ್‌ಎಸ್ ಅಧ್ಯಕ್ಷ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಸ್ಪರ್ಧಿಸುತ್ತಿರುವ ಗಜ್ವೆಲ್‌ನಿಂದ 44 ಮತ್ತು ಕಾಮರೆಡ್ಡಿ ವಿಧಾನಸಭಾ ಕ್ಷೇತ್ರದಿಂದ 39 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಎಲ್ ಬಿ ನಗರ ಕ್ಷೇತ್ರದಿಂದ ಅತಿ ಹೆಚ್ಚು 48 ಅಭ್ಯರ್ಥಿಗಳಾಗಿದ್ದರೆ, ಬಾನ್ಸವಾಡ ಮತ್ತು ನಾರಾಯಣಪೇಟೆ ಕ್ಷೇತ್ರಗಳಲ್ಲಿ ಕನಿಷ್ಠ 7 ಮಂದಿ ಸ್ಪರ್ಧಿಸಿದ್ದಾರೆ.
ಇದನ್ನೂ ಓದಿ: ಮುಂದಿನ 5 ವರ್ಷ ಉಚಿತ ಪಡಿತರ ಯೋಜನೆ ಕೇಂದ್ರದ ಪ್ರಕಟಣೆಯಲ್ಲಿ ಏಕಿಲ್ಲ: ಜೈರಾಮ್ ರಮೇಶ್
ಕಾಂಗ್ರೆಸ್ ಮತ್ತು ಇತರ ಪ್ರಮುಖ ಪಕ್ಷಗಳಿಂದ ಸ್ಪರ್ಧಿಸಲು ಟಿಕೆಟ್ ಸಿಗದೆ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಹಲವು ಮುಖಂಡರು ಅಧಿಕೃತ ಅಭ್ಯರ್ಥಿಗಳ ಪರವಾಗಿ ನಾಮಪತ್ರ ಹಿಂಪಡೆದಿದ್ದು, ಬುಧವಾರ ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದೆ.
ಇದಕ್ಕೂ ಮುನ್ನ ಚುನಾವಣಾಧಿಕಾರಿಗಳು 2,898 ಅಭ್ಯರ್ಥಿಗಳ ನಾಮಪತ್ರಗಳು ಸಿಂಧುವಾಗಿದ್ದು, 606 ಅಭ್ಯರ್ಥಿಗಳ ನಾಮಪತ್ರಗಳನ್ನು ಪರಿಶೀಲನೆ ವೇಳೆ ತಿರಸ್ಕರಿಸಿದ್ದರು. ಇತ್ತೀಚಿನ ವರದಿಗಳ ಪ್ರಕಾರ, ತೆಲಂಗಾಣವು 3.26 ಕೋಟಿಗೂ ಹೆಚ್ಚು ಅರ್ಹ ಮತದಾರರನ್ನು ಹೊಂದಿದ್ದು, ಬಹುತೇಕ ಸಮಾನ ಸಂಖ್ಯೆಯ ಪುರುಷ ಮತ್ತು ಮಹಿಳಾ ಮತದಾರರ ಹೊಂದಿದೆ.
ಇದನ್ನೂ ಓದಿ: ಎಲ್‌ಪಿಜಿ ಸಿಲಿಂಡರ್‌ಗೆ ₹450 ಸಬ್ಸಿಡಿ, 2.5 ಲಕ್ಷ ಸರ್ಕಾರಿ ಉದ್ಯೋಗ: ರಾಜಸ್ಥಾನ ಬಿಜೆಪಿ ಪ್ರಣಾಳಿಕೆ ಬಿಡುಗಡೆ
ಸೆರಿಲಿಂಗಂಪಲ್ಲಿ ಭಾಗದಲ್ಲಿ 7.32 ಲಕ್ಷಕ್ಕೂ ಹೆಚ್ಚು ಮತದಾರರಿದ್ದರೆ, ಭದ್ರಾಚಲಂ 1.49 ಲಕ್ಷ ಮತದಾರರೊಂದಿಗೆ ಅತಿ ಕಡಿಮೆ ಮತದಾರರನ್ನು ಹೊಂದಿದೆ. 119 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 30 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಹೊರಬೀಳಲಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.