ಹುಬ್ಬಳ್ಳಿ: ಇಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರ ಅನುಮತಿ ನೀಡಲಿಲ್ಲ ಎಂದು ಆರೋಪಿಸಿ, ಬಿಜೆಪಿ ಮುಖಂಡರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬಳಿ ರಸ್ತೆ ತಡೆದು ಆಕ್ರೋಶ ಹೊರಹಾಕಿದರು.
ಅಲ್ಲದೆ, ಸಿಎಂ ಸಿದ್ದರಾಮಯ್ಯ ಅವರ ಪ್ರತಿಕೃತಿ ಹಾಗೂ ರಾಹುಲ್ ಗಾಂಧಿ ಫೋಟೋ ದಹನ ಮಾಡಿ, ಹಿಂದೂ ವಿರೋಧಿ ಕಾಂಗ್ರೆಸ್ ಎಂದು ಘೋಷಣೆ ಕೂಗಿದರು. ರಸ್ತೆಯಲ್ಲೇ ಟೈರ್‌ಗೆ ಬೆಂಕಿ ಹಚ್ಚಿ, ಸರ್ಕಾರದ ನಡೆಯನ್ನು ಖಂಡಿಸಿದರು.
ಗಣೇಶ ಪ್ರತಿಷ್ಠಾಪನೆಗೆ ಹೈಕೋರ್ಟ್ ಅನುಮತಿ ಕೊಟ್ಟಿದ್ದರೂ ಪಾಲಿಕೆ ಅನುಮತಿ ಕೊಡುತ್ತಿಲ್ಲ ಎಂದು ದೂರಿದರು. ಪಾಲಿಕೆ ಆಯುಕ್ತರು ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದರು. ಇನ್ನು ಈ ಪ್ರತಿಭಟನೆಗೆ ಶಾಸಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ ಕೂಡ ಸಾಥ್ ನೀಡಿದರು.


ಪ್ರತಿಭಟನಾ ಸ್ಥಳಕ್ಕೆ ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಭೇಟಿ ನೀಡಿದರು. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು, ಆದರೆ, ದಿಢೀರನೆ ರಸ್ತೆ ಬಂದ್ ಮಾಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗಿದೆ. ತಕ್ಷಣವೇ ಪ್ರತಿಭಟನಾಕಾರರನ್ನ ವಾಪಸ್ ಕಳಿಸಿ, ರಸ್ತೆ ಸಂಚಾರ ಸುಗಮಗೊಳಿಸಿದ್ದೇವೆ ಎಂದರು.
ಇದನ್ನೂ ಓದಿ: ಈದ್ಗಾ ಮೈದಾನದ ಮೇಲೆ ಅಂಜುಮನ್ ಸಂಸ್ಥೆಗೆ ಅಧಿಕಾರವಿಲ್ಲ: ಬೆಲ್ಲದ್
ಗಣೇಶೋತ್ಸವ ಸಂಬಂಧ ಒಂದು ಗಂಟೆಯಲ್ಲಿ ಪಾಲಿಕೆ ಆಯುಕ್ತರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಅಲ್ಲಿಯವರೆಗೂ ಶಾಂತಿ ಕಾಪಾಡಿ ಎಂದು ಪ್ರತಿಭಟನಾಕಾರರಿಗೆ ಹೇಳಿದ್ದೇವೆ. ಆದರೆ, ರಸ್ತೆ ತಡೆ ಮಾಡಿದ್ದಾರೆ. ಕಾನೂನು ಎಲ್ಲರಿಗೂ ಒಂದೇ, ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಅಲ್ಲದೆ, ಎರಡು ದಿನಗಳಿಂದ ಪಾಲಿಕೆ ಕೆಲಸಗಳಿಗೆ ಅಡ್ಡಿಪಡಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಸಂಬಂಧ ಪಾಲಿಕೆಯಿಂದ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.