ಬೆಂಗಳೂರು: ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದವರನ್ನು ಗುರುತಿಸಬೇಕು ಎಂದು ಬೃಹತ್ ಕೈಗಾರಿಕಾ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ (MB Patil) ಪದಾಧಿಕಾರಿಗಳಿಗೆ ಹೊಸ ಟಾಸ್ಕ್ ಕೊಟ್ಟಿದ್ದಾರೆ.
ಕೆಪಿಸಿಸಿ (KPCC) ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪ್ರಚಾರ ಸಮಿತಿಯ ಪದಾಧಿಕಾರಿಗಳಿಗೆ ಕೃತಜ್ಞತೆ ತಿಳಿಸಿದರು. ‘ನಿಮ್ಮೆಲ್ಲರ ಪರಿಶ್ರಮದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ; ಚುನಾವಣೆ ಸಮಯದಲ್ಲಿ ಪ್ರಚಾರ ಸಮಿತಿ ಹೆಸರು ಪಡೆದುಕೊಳ್ಳುತ್ತೆ, ಉಳಿದ ಸಮಯದಲ್ಲಿ ಕೆಪಿಸಿಸಿ ಹೆಸರು ಪಡೆಯುತ್ತೆ. ಪಕ್ಷಕ್ಕೆ ನಿಷ್ಠೆಯಿಂದ ದುಡಿದವರನ್ನು ಗುರುತಿಸಬೇಕು’ ಎಂದು ಹೇಳಿದರು.
‘ಪಕ್ಷಕ್ಕಾಗಿ ದುಡಿದವರನ್ನು ಗುರುತಿಸುವುದರಿಂದ ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಲು ಸಹಾಯವಾಗಲಿದೆ. ಚುನಾವಣೆ ಸಮಯದಲ್ಲಿ ನಾವು ಗ್ಯಾರಂಟಿಗಳನ್ನು (Congress Guarantee’s) ಘೋಷಿಸಿದ್ದೆವು. ಗ್ಯಾರಂಟಿ ಅನುಷ್ಠಾನ ಕಷ್ಟ ಎಂದು ಮೋದಿ ಹೇಳುತ್ತಿದ್ದರು, ನೂರು ದಿನಗಳಲ್ಲಿ ನಾಲ್ಕು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತೇನೆ’ ಎಂದರು.
ಇದನ್ನೂ ಓದಿ; ‘ಮಾಜಿ ಸಚಿವರು ನಿಗಮ ಮಂಡಳಿಗೆ ಬೇಡಿಕೆ ಇಡಬಾರದು; ಕಾರ್ಯಕರ್ತರಿಗೆ ಆದ್ಯತೆ ಕೊಡಬೇಕು’
‘ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ; ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೆ ಬಹಳಷ್ಟು ವ್ಯತ್ಯಾಸ ಇದೆ. ಕೇಂದ್ರದ ಮೋದಿ ಸರ್ಕಾರವನ್ನು ನೇರವಾಗಿ ಎದುರಿಸುವ ಚುನಾವಣೆ ಇದಾಗಿದೆ. ಕಾಂಗ್ರೆಸ್ ಸರ್ಕಾರದ ಸಾಧನೆಗಳು, ನೆಹರು, ರಾಜೀವ್ ಗಾಂಧಿ, ಮನಮೋಹನ್ ಸಿಂಗ್ (Manamohan Singh) ಅವಧಿಯ ಸಾಧನೆಗಳ ಬಗ್ಗೆ ಅರಿವು ಮೂಡಿಸಬೇಕು. ಕಾಂಗ್ರೆಸ್ 70 ವರ್ಷಗಳಲ್ಲಿ ಏನು ಮಾಡಿದೆ ಎಂದು ತಿಳಿಸಬೇಕು. ದೇಶದಲ್ಲಿರುವ 95% ಡ್ಯಾಂಗಳು ಕಾಂಗ್ರೆಸ್ ಆಡಳಿತದಲ್ಲಿ ನಿರ್ಮಿಸಲಾಗಿದೆ’ ಎಂದು ಕಾಂಗ್ರೆಸ್ ಸಾಧನೆ ವಿವರಿಸಿದರು.
‘ಆದರೆ, ಕಾಂಗ್ರೆಸ್ ಸರ್ಕಾರದ ಸಾಧನೆಗಳಿಂದ ಬಿಜೆಪಿ (BJP) ಪ್ರಚಾರ ತಗೆದುಕೊಳ್ಳುತ್ತಿದೆ. ಹೆಚ್ ಎಎಲ್, ರೈಲ್ವೆ, ಏರ್ಪೋರ್ಟ್, ಇಸ್ರೋ, ಐಎಎಂ ಇವೆಲ್ಲವುಗಳನ್ನು ಇಟ್ಟುಕೊಂಡು ಮೋದಿ ತಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಮೋದಿ ನಂಬರ್ ಒನ್ ಎಂದು ಹೇಳಿಕೊಳ್ಳುತ್ತಾರೆ; ಭಾರತವನ್ನು ನಂಬರ್ ಒನ್ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಮೊಬೈಲ್, ಕಂಪ್ಯೂಟರ್ ರಾಜೀವ್ ಗಾಂಧಿ ಕೊಟ್ಟ ಕೊಡುಗೆ, ಮೋದಿಯದಲ್ಲಾ. ಕಳೆದ ಒಂಬತ್ತು ವರ್ಷಗಳಲ್ಲಿ ಮೋದಿ ಏನು ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.
ಇದನ್ನೂ ಓದಿ; ‘ಸನಾತನ ಧರ್ಮ ನಿರ್ಮೂಲನೆ’ ಹೇಳಿಕೆ; ಕ್ರಿಶ್ಚಿಯನ್ ಮಿಷನರಿಗಳು ಬೆಳೆಸುವ ಕಲ್ಪನೆ ಎಂದ ಅಣ್ಣಾಮಲೈ
‘ವಿದೇಶದಲ್ಲಿ ಕಪ್ಪುಹಣ ಇದೆ, ಅದನ್ನು ತಂದು ಪ್ರತಿಯೊಬ್ಬರಿಗೆ ₹15 ಲಕ್ಷ ಕೊಡ್ತೀನಿ ಎಂದರು; ಯಾರಿಗೆ ಬಂದಿದೆ? 9 ವರ್ಷ ಆಯ್ತು ಇನ್ನೂ 15 ಲಕ್ಷ ಬರಲಿಲ್ಲ, ರೈತರ ಆದಾಯ ದ್ವಿಗುಣ ಆಗಲಿಲ್ಲ. ಬರೀ ಭಾಷಣ ಮಾಡ್ತಾರೆ’ ಎಂದರು.
ಬುದ್ದ, ನಾರಾಯಣಗುರುಗಳ ಸಿದ್ದಾಂತವೇ ಕಾಂಗ್ರೆಸ್ ಸಿದ್ಧಾಂತ
‘ಕಾಂಗ್ರೆಸ್ (Congress) ಸಿದ್ಧಾಂತಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು, ಗೌತಮ ಬುದ್ದ, ನಾರಾಯಣಗುರುಗಳ ಸಿದ್ಧಾಂತವೇ ಕಾಂಗ್ರೆಸ್ ಸಿದ್ಧಾಂತ. ಕಾಂಗ್ರೆಸ್ ಸರ್ವ ಜನಾಂಗದ ಶಾಂತಿಯ ತೋಟ ಇದ್ದಂತೆ, ಭಾರತ್ ಜೋಡೋ ಮಾಡಿದ್ದು ಎಲ್ಲರನ್ನೂ ಒಗ್ಗೂಡಿಸಲು. ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಉಳಿಯಬೇಕು; ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು’ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.