ನಾಗ್ಪುರ: ಬಿಜೆಪಿ ನೇತೃತ್ವದ ಎನ್‌ಡಿಎ ಸಭೆಯಲ್ಲಿ ಭಾಗವಹಿಸಿದ್ದ 38 ರಾಜಕೀಯ ಪಕ್ಷಗಳ ಪೈಕಿ 4–5 ಪಕ್ಷಗಳು ವಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಜತೆ ಸಂಪರ್ಕದಲ್ಲಿದ್ದು, ಮುಂದಿನ ದಿನಗಳಲ್ಲಿ ಸೇರ್ಪಡೆಯಾಗಲಿವೆ ಎಂದು ಕಾಂಗ್ರೆಸ್ ವಕ್ತಾರ ಅಲೋಕ್ ಶರ್ಮಾ ಸುಳಿವು ನೀಡಿದರು.
ಮುಂಬೈನಲ್ಲಿ ಸೆಪ್ಟೆಂಬರ್ 1ರಂದು ಮೈತ್ರಿಕೂಟದ ಸಭೆ ನಡೆಯಲಿದ್ದು, ಇದರಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು. ಈ ವೇಳೆ ನಾಲ್ಕೈದು ಪಕ್ಷಗಳು ಶೀಘ್ರದಲ್ಲೇ ‘ಇಂಡಿಯಾ’ ಮೈತ್ರಿಕೂಟಕ್ಕೆ ಸೇರ್ಪಡೆಯಾಗಲಿವೆ. ಕೆಲವು ಪಕ್ಷಗಳು ಲೋಕಸಭೆ ಚುನಾವಣೆಗೂ ಮುನ್ನ ಇಂಡಿಯಾ ಕೂಟ ಸೇರಲಿವೆ ಎಂದರು.
‘ದೇಶದ ಪ್ರಸ್ತುತ ಪರಿಸ್ಥಿತಿ ಪರಿಗಣಿಸಿ, ಯಾರು ಮುನ್ನಡೆಸುತ್ತಾರೆ ಎಂಬುದು ಮುಖ್ಯವಲ್ಲ. ಆದರೆ, ನಾವೆಲ್ಲರೂ ಒಟ್ಟಾಗಿ ಈ ದುರಹಂಕಾರಿ ಸರ್ಕಾರವನ್ನು ಹೇಗೆ ತೆಗೆದುಹಾಕುವುದು ಮುಖ್ಯ. ವಿವಿಧ ರಾಜ್ಯಗಳು ಮತ್ತು ಪ್ರದೇಶಗಳಲ್ಲಿ ಯಾರು ಬೇಕಾದರೂ ಮುನ್ನಡೆಸಬಹುದು. ಆದರೆ, ಕಾಂಗ್ರೆಸ್ ದೇಶದ ಎಲ್ಲರನ್ನೂ ಒಗ್ಗೂಡಿಸಲು ಎಲ್ಲಾ ರಾಜ್ಯಗಳಲ್ಲಿ ಶಕ್ತಿಯಾಗಿ ಕೆಲಸ ಮಾಡುತ್ತದೆ’ ಎಂದರು.
ಇದನ್ನೂ ಓದಿ: ಎಸ್.ಟಿ.ಸೋಮಶೇಖರ್ ಅವರ ಕಾಂಗ್ರೆಸ್ ಸೇರ್ಪಡೆ ನಾಳೆ ಘೋಷಣೆ ಸಾಧ್ಯತೆ
ಇನ್ನು ರಾಹುಲ್ ಗಾಂಧಿ ಮತ್ತೆ ಅಮೇಠಿಯಿಂದ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಮೇಠಿಯಿಂದ ಯಾರು ಸ್ಪರ್ಧಿಸುತ್ತಾರೆ ಎಂಬ ನಿರ್ಧಾರವನ್ನು ರಾಹುಲ್ ಗಾಂಧಿ ಮತ್ತು ಅವರ ಕುಟುಂಬ ತೆಗೆದುಕೊಳ್ಳುತ್ತದೆ. ಈ ಬಗ್ಗೆ ಅಧಿಕೃತ ನಿರ್ಧಾರ ಕೈಗೊಂಡಿಲ್ಲ. ಆದರೆ, ಕಾಂಗ್ರೆಸ್‌ನ ಬ್ಲಾಕ್ ಮಟ್ಟದ ಅಧ್ಯಕ್ಷರೂ ಅಮೇಠಿಯಿಂದ ಸ್ಪರ್ಧಿಸಿದರೆ, ಸ್ಮೃತಿ ಇರಾನಿಗೆ ಸೋಲು ಖಚಿತ’ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.