ಬೆಂಗಳೂರು: ಭಾರತದ ಸಂವಿಧಾನ ಕೇವಲ ವಕೀಲರ ದಾಖಲೆಗೆ ಮಾತ್ರ ಪುಸ್ತಕವಲ್ಲ; ಅದು ನಮ್ಮೆಲ್ಲರ ಬದುಕಿಗೆ ಅನಿವಾರ್ಯ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಆಚರಣೆಯ ಅಂಗವಾಗಿ ವಿಧಾನಸೌಧದ ಪೂರ್ವ ದ್ವಾರದಲ್ಲಿ ನಡೆದ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ವಿಶ್ವದ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಇಡೀ ವಿಶ್ವದ ಒಂದೂವರೆ ಕೋಟಿ ಜನ ಪಾಲ್ಗೊಂಡು ಆಚರಣೆ ಮಾಡುತ್ತಿದ್ದಾರೆ. ದೇಶದ ಯುವ ಸಮುದಾಯ ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ಮಾಡಬೇಕಿದೆ. ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ಅವರಿಗೆ ಮಾರ್ಗದರ್ಶನ ಮಾಡಬೇಕಿದೆ’ ಎಂದು ಹೇಳಿದರು.
ಇದನ್ನೂ ಓದಿ; ಸಂವಿಧಾನ ವಿರೋಧಿಗಳ ಬಗ್ಗೆ ಸದಾ ಎಚ್ಚರವಾಗಿರಬೇಕು : ಸಿಎಂ ಸಿದ್ದರಾಮಯ್ಯ
‘ಸಂವಿಧಾನ ರಚಿಸಿದ ಅಂಬೇಡ್ಕರ್ ಅವರಿಗೆ ನಾವು ಚಿರಋಣಿಯಾಗಬೇಕು; ಸಂವಿಧಾನ ಕೇವಲ ವಕೀಲರ ದಾಖಲೆಗೆ ಪುಸ್ತಕವಲ್ಲ. ಅದು ನಮ್ಮೆಲ್ಲರ ಬದುಕಿಗೆ ಅನಿವಾರ್ಯ. ಭಾರತ ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಎಂಬ ಹೆಸರು ಪಡೆದಿದೆ. ಇದನ್ನು ಉಳಿಸಿಕೊಳ್ಳೋಣ, ಬೆಳಸಿಕೊಳ್ಳೋಣ’ ಎಂದು ಡಿಕೆಶಿ ಹೇಳಿದರು.


ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ (HC Mahadevappa) ಮಾತನಾಡಿ, ‘ಪ್ರಪಂಚದಾದ್ಯಂತ ನಮ್ಮ ಸಂವಿಧಾನ ಪೀಠಿಕೆ ಕಾರ್ಯಕ್ರಮ ವೀಕ್ಷಿಸಲಾಗ್ತಿದೆ; ನಮ್ಮ ಈ ಕಾರ್ಯಕ್ರಮ ಹೊಸ ಇತಿಹಾಸ ಬರೆದಿದೆ. ಸಂವಿಧಾನ ಪೀಠಿಕೆ ಓದುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದೆ. ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಸೆ.15, ಪ್ರಜಾಪ್ರಭುತ್ವ ಅಸಮಾನತೆಯನ್ನು ತೊಡೆದು ಸಮಸಮಾಜದ ಕಡೆಗೆ ಕರೆದೊಯ್ಯತ್ತದೆ. ಸಂವಿಧಾನದ ಮೂಲಭೂತ ವಿಚಾರ ಎಲ್ಲರೂ ಅರ್ಥಮಾಡಿಕೊಳ್ಳಬೇಕಾಗಿದೆ. ಪ್ರಜಾ ಸತ್ತಾತ್ಮಕ ಆಶಯಗಳ ಮೂಲಕ ವ್ಯವಸ್ಥೆಯನ್ನು ಬಲಪಡಿಸುವ ಕಾರ್ಯ ಆಗಬೇಕಿದೆ’ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.