Friday, September 29, 2023
spot_img
- Advertisement -spot_img

ಸೋಲುಗಳಿಂದ ಸಚಿವ ಸ್ಥಾನದವರೆಗೆ ತಲುಪಿದ ಮಧು ಬಂಗಾರಪ್ಪ ರಾಜಕೀಯ ದಾರಿಯಲ್ಲಿ ಏನಿತ್ತು?

ರಾಜಕೀಯದಲ್ಲಿ ಸೋಲು, ನಿರಾಸೆಗಳನ್ನೆಲ್ಲ ಮೆಟ್ಟಿನಿಂತ ರಾಜಕಾರಣಿ ಮಧು ಬಂಗಾರಪ್ಪ ರಾಜಕಾರಣದಲ್ಲಿ ತಾಳ್ಮೆಯಿಂದ ಸಾಗಿದರೆ ಯಶಸ್ಸು ನಿಶ್ಚಿತವಾಗಿ ಲಭಿಸುತ್ತದೆ ಎಂಬ ನಂಬಿಕೆಯ ರಾಜಕಾರಣಿ ಮಧು ಬಂಗಾರಪ್ಪ.

ಚಂದ್ರಗುತ್ತಿಯ ನಾಡು, ಮಲೆನಾಡ ಸೊಬಗಿನ ರಾಜಕಾರಣಿಯಾಗಿ, ಸಾರೆಕೊಪ್ಪದ ಸರದಾರ ಎಂದೇ ಖ್ಯಾತಿಯಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಹಾಗೂ ಶಕುಂತಲಾ ದಂಪತಿಯ ಮಗನಾಗಿ 1966ರ ಸೆಪ್ಟೆಂಬರ್‌ 4ರಂದು, ಸೊರಬ ತಾಲೂಕಿನ ಕುಬಟೂರಿನಲ್ಲಿ ಜನಿಸುವ ಮಧು ಬಂಗಾರಪ್ಪ ಅವರು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪತ್ನಿ ಅನಿತಾ ಹಾಗೂ ಓರ್ವ ಪುತ್ರನನ್ನು ಹೊಂದಿದ್ದಾರೆ.
ಅಲ್ಲದೆ ಇವರಿಗೆ ಸಹೋದರ ಕುಮಾರ್ ಬಂಗಾರಪ್ಪ ಹಾಗೂ ಚಲನಚಿತ್ರ ನಟ ಶಿವರಾಜಕುಮಾರ್ ಅವರ ಪತ್ನಿ ಗೀತಾ ಶಿವರಾಜಕುಮಾರ್ ಸೇರಿದಂತೆ ಒಟ್ಟು ಮೂವರು ಸಹೋದರಿಯರಿದ್ದಾರೆ.

ಬಣ್ಣದ ಲೋಕದತ್ತ ಮಧು ಚಿತ್ತ…

1992ರ ಸಮಯದಲ್ಲಿಕನ್ನಡ ಚಲನಚಿತ್ರಗಳನ್ನು ನಿರ್ಮಿಸುತ್ತಿದ್ದ ಮಧು, ಬೆಳ್ಳಿಯಪ್ಪ ಬಂಗಾರಪ್ಪ ಎಂಬ ಚಲನಚಿತ್ರ ನಿರ್ಮಿಸಿ ಉತ್ತಮ ಯಶಸ್ಸನ್ನು ಕಂಡಿದ್ದರು. ಸಹೋದರ ಕುಮಾರ್ ಬಂಗಾರಪ್ಪರನ್ನು ತೆರೆ ಮೇಲೆ ತಂದು ಅವರೊಂದಿಗೆ ಚಿತ್ರದ ನಿರ್ಮಾಣಕ್ಕೆ ಜೊತೆಯಾಗಿದ್ದರು.

ಕಲ್ಲರಳಿ ಹೂವಾಗಿ, ಚಲನ ಚಿತ್ರದ ನಿರ್ಮಾಪಕರಾಗಿದ್ದಲ್ಲದೆ ತಾಯಿ ಇಲ್ಲದ ತವರು, ಗೋಕರ್ಣ, ಆದಿತ್ಯ ಸೇರಿದಂತೆ ಗಂಡುಗಲಿ ಕುಮಾರರಾಮ ಚಿತ್ರಗಳಲ್ಲಿ ನಟರಾಗಿ ಪಾತ್ರ ನಿರ್ವಹಿಸಿದ್ದಾರೆ. 2013ರಲ್ಲಿ ಸೊರಬ ಕ್ಷೇತ್ರದಲ್ಲಿ ಇವರು ಜೆಡಿಎಸ್ ಪಕ್ಷದಿಂದ ರಾಜಕೀಯ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

ಇದೇ ವರ್ಷದಲ್ಲಿ ಯಡಿಯೂರಪ್ಪ ಸ್ಥಾಪಿಸಿದ್ದ ಕೆಜೆಪಿಯ ಅಭ್ಯರ್ಥಿಯಾಗಿದ್ದ ಹರತಾಳು ಹಾಲಪ್ಪ ಅವರನ್ನು ಸೋಲಿಸಿದ್ದರು. ಆಗ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಸಹೋದರ ಕುಮಾರ್ ಬಂಗಾರಪ್ಪ ಅವರು ಕಳಪೆ ಪ್ರದರ್ಶನ ತೋರಿದ್ದರು. ಬಳಿಕ 2018ರಲ್ಲಿ ಜರುಗಿದ ವಿಧಾನಸಭೆ ಚುನಾವಣೆಯಲ್ಲಿ ಇದೇ ಕುಮಾರ ಬಂಗಾರಪ್ಪ ಅವರು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿಜೆಪಿಗೆ ಸೇರ್ಪಡೆಯಾಗಿದ್ದ ಸಂದರ್ಭದಲ್ಲಿ ಕುಮಾರ್ ವಿರುದ್ಧ ಮಧು ಬಂಗಾರಪ್ಪ ಪರಾಭವಗೊಂಡಿದ್ದರು.

ಮಧು ರಾಜಕೀಯ ಹಾದಿಯಲ್ಲಿ ಸೋಲುಗಳದ್ದೆ ಅರ್ಧ ಪಾಲು…

ಮಧು ಬಂಗಾರಪ್ಪ ಅವರು 2013ರಲ್ಲಿ ಸೊರಬ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ರಾಜಕೀಯ ಪ್ರವೇಶಿಸಿದರು. 2013ರ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿಯ ಹರತಾಳು ಹಾಲಪ್ಪ ವಿರುದ್ಧ ಗೆಲುವು ದಾಖಲಿಸಿದರು.

ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸಹೋದರ ಕುಮಾರ್ ಬಂಗಾರಪ್ಪ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಮಧು ಬಂಗಾರಪ್ಪ ಅವರು, 2013, 2014ರ ಅವಧಿಯಲ್ಲಿ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿಯೂ ಸಹ ಕೆಲಸ ಮಾಡಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು, ಆ ಸಮಯದಲ್ಲಿ ಕುಮಾರ್‌ ಬಂಗಾರಪ್ಪ ವಿರುದ್ಧ ಮಧು ಬಂಗಾರಪ್ಪ ಸೋಲು ಅನುಭವಿಸಿದ್ದರು. ಈ ವೇಳೆಯಲ್ಲಿ ಅವರನ್ನು ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು.

ಬಳಿಕ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮೈತ್ರಿಯಿಂದ ಅದೃಷ್ಟ ಪರೀಕ್ಷೆಗಿಳಿದಿದ್ದ ಮಧು ಬಂಗಾರಪ್ಪ ಅವರಿಗೆ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ರಾಘವೇಂದ್ರ ಎದುರು ವಿಜಯಲಕ್ಷ್ಮೀ ಕೈ ಹಿಡಿಯಲಿಲ್ಲ ಅವರು ಸೋಲುಣಬೇಕಾಯಿತು.

ಸೋಲಿನಿಂದ ಶಿಕ್ಷಣ ಮಂತ್ರಿಯವರೆಗೆ ಮಧು ಪ್ರಯಾಣ…

ಇದಾದ ನಂತರ ಜೆಡಿಎಸ್ ಪಕ್ಷದಿಂದ ದೂರ ಉಳಿದಿದ್ದ ಅವರು, ಜುಲೈ 30, 2021ರಂದು ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ್ದಲ್ಲದೆ ನಂತರ ಅದೇ ಪಕ್ಷದಿಂದ ಹಿಂದುಳಿದ ವರ್ಗಗಳ ಸಮಿತಿಯ ಅಧ್ಯಕ್ಷರಾಗಿಯೂ ನೇಮಕಗೊಳ್ಳುತ್ತಾರೆ.

ಚುನಾವಣಾ ರಾಜಕೀಯ ಜೀವನದ ದಾರಿಯುದ್ದಕ್ಕೂ ಗೆಲುವಿಗಿಂತಲೂ ಬಹುಪಾಲು ಸೋಲಿನ ಪಾತ್ರವೇ ಹೆಚ್ಚಾಗಿರುವ ಮಧು ಬಂಗಾರಪ್ಪರ ಬದುಕಿನಲ್ಲಿ ಎರಡು ಬಾರಿ ಶಾಸಕರಾಗಿರುವ ಕ್ಷಣಗಳು ಅವಿಸ್ಮರಣೀಯವಾಗಿವೆ.

ಪ್ರಸ್ತುತವಾಗಿ ಎರಡನೇ ಬಾರಿಗೆ 2023ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕ ಮತಗಳ ಅಂತರದಿಂದ ಗೆಲುವು ಕಂಡಿರುವ ಇವರು ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಸಚಿವರಾಗಿ ಜವಾಬ್ದಾರಿ ಹೊತ್ತಿದ್ದಾರೆ. 2004 ರಿಂದ 2023ರವರೆಗೆ ಐದು ಬಾರಿ ಸೊರಬ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಎರಡು ಬಾರಿ ಗೆಲುವು ಕಂಡಿರುವ ಇವರು ತಾಳ್ಮೆಯ ಫಲವಾಗಿ ಶಿಕ್ಷಣ ಇಲಾಖೆಯನ್ನು ಮುನ್ನಡೆಸುತ್ತಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles