ಬೆಂಗಳೂರು: ಮಹಾತ್ಮ ಗಾಂಧಿಯನ್ನು ಕೊಂದ ಮನಸ್ಥಿತಿಯೇ ಗೌರಿ ಲಂಕೇಶ್, ದಾಭೋಲ್ಕರ್, ಪನ್ಸಾರೆ, ಎಂ.ಎಂ.ಕಲ್ಬುರ್ಗಿ ಅವರನ್ನು ಕೊಂದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಟೌನ್‌ಹಾಲ್‌ನಲ್ಲಿ ನಡೆದ ಗೌರಿ ಲಂಕೇಶ್ ಅವರ ಸ್ಮರಣಾರ್ಥ ‘ಗೌರಿ ನೆನಪು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೌರಿ ಲಂಕೇಶ್ ಅವರು ಇಂದು ನಮ್ಮ ಜೊತೆಗಿಲ್ಲ ಆದರೆ ಅವರ ಅದಮ್ಯ ಚೇತನ ಇಂದು ನಮ್ಮ ಜೊತೆಗಿದೆ ಎಂದರು.
ಮಹಾತ್ಮಗಾಂಧಿ ಅತ್ಯಂತ ಧರ್ಮನಿರಪೇಕ್ಷತೆಯಿಂದ ಬದುಕು ಸಾಗಿಸುತ್ತಿದ್ದರು. ಇದನ್ನು ಸಹಿಸಲಾಗದ ಮನಸ್ಥಿತಿ ಹೊಂದಿದ್ದವರು ಅವರನ್ನು ಕೊಂದು ಹಾಕಿದ್ರು. ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆಯುತ್ತಿರುವ ಕಿಡಿಗೇಡಿಗಳು ಎಷ್ಟೇ ಪ್ರಭಲರಾಗಿದ್ದರೂ, ಅವರ ಹಿಂದೆ ಎಷ್ಟೇ ದೊಡ್ಡ ರಾಜಕೀಯ ಒತ್ತಾಸೆ ಇದ್ದರೂ ಅವರನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ: ‘ಇಂಡಿಯಾ ಹೆಸರು ಬದಲಿಸಿ ಬಿಜೆಪಿಯವರು ತಮ್ಮ ಸೋಲನ್ನು ನೋಡುತ್ತಿದ್ದಾರೆ’
ಗೌರಿಯನ್ನು ಕೊಂದ ಆರೋಪಿಗಳಿಗೆ ಶಿಕ್ಷೆ ಆದಾಗ ಮಾತ್ರ ಗೌರಿ ಆತ್ಮಕ್ಕೆ ಶಾಂತಿ ಸಿಗುತ್ತದೆ. ಪೊಲೀಸ್ ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚೆ ನಡೆಸಿ ಮಾಹಿತಿ ಪಡೆದಿದ್ದೇನೆ. ಸಾವಿರಕ್ಕೂ ಅಧಿಕ ಪುಟಗಳ ಆರೋಪ ಪಟ್ಟಿ ಸಲ್ಲಿಕೆಯಾಗಿ, 500ಕ್ಕೂ ಹೆಚ್ಚು ಸಾಕ್ಷಿಗಳನ್ನು ಅದರಲ್ಲಿ ಪಟ್ಟಿ ಮಾಡಲಾಗಿದೆ.
ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಕೂಡ ವೇಗವಾಗಿ ನಡೆಯುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ. ಹೀಗಾಗಿ ತನಿಖಾ ತಂಡದ ವೃತ್ತಿಪರತೆ ಮತ್ತು ಶ್ರಮ ವ್ಯರ್ಥವಾಗುವುದಿಲ್ಲ. ಆರೋಪಿಗಳಿಗೆ ಖಂಡಿತಾ ಶಿಕ್ಷೆ ಆಗುತ್ತದೆ ಎನ್ನುವ ಭರವಸೆ ನನಗಿದೆ ಎಂದಿದ್ದಾರೆ.
ಇದನ್ನೂ ಓದಿ: ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಕಿಡಿಕಾರಿದ ಆರಗ ಜ್ಞಾನೇಂದ್ರ
ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಗೌರಿ ನನ್ನನ್ನು ಹತ್ತಾರು ಬಾರಿ ಭೇಟಿಯಾಗಿದ್ದರು. ಆದರೆ ಒಂದು ಬಾರಿಯೂ ಪತ್ರಿಕೆಗೆ ಸಹಾಯ ಕೇಳಲು, ತನ್ನ ಕುಟುಂಬಕ್ಕೆ ಸಹಾಯ ಕೇಳಲು, ವೈಯುಕ್ತಿಕ ಕೆಲಸಗಳಿಗಾಗಿ ಯಾವತ್ತೂ ಬಂದಿರಲಿಲ್ಲ. ಕೇವಲ ಆದಿವಾಸಿಗಳ, ರೈತರ, ಕಾರ್ಮಿಕರ ಸಮಸ್ಯೆಗಳಿಗಾಗಿ ಪರಿಹಾರ ಕೇಳಲು ಬರುತ್ತಿದ್ದರು. ವೈಚಾರಿಕವಾಗಿ ಆಕೆಯನ್ನು ಎದುರಿಸಲಾಗದವರು ಕೊಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.