ಮಂಡ್ಯ : ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಮಾಜಿ ಸಚಿವ ಹಾಗೂ ಯಶವಂತಪುರದ ಹಾಲಿ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಅವರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿಯ ಬಳಿಕ ಇದೀಗ ಮತ್ತೊಬ್ಬ ಮಾಜಿ ಸಚಿವರ ಕೈ ಸೇರ್ಪಡೆಯ ಬಗ್ಗೆ ಜೋರಾಗಿ ಚರ್ಚೆ ನಡೆಯುತ್ತಿದೆ.
ಮಾಜಿ ಸಚಿವ ಕೆ.ಸಿ. ನಾರಾಯಣ ಗೌಡ ಬಿಜೆಪಿ ಬಿಟ್ಟು ಕೈ ಹಿಡಿಯುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಕಳೆದ ಮೂರು ಬಿಜೆಪಿಯೊಂದಿಗೆ ಅಂತರ ಕಾಯ್ದುಕೊಂಡಿರುವ ಅವರು ಅಧಿಕಾರ ಬಯಸಿ ಕಾಂಗ್ರೆಸ್ ಬಾಗಿಲನ್ನು ತಟ್ಟಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ಕಾವೇರಿ ಜಲ ವಿವಾದ : ಇಂದು ಸರ್ವ ಪಕ್ಷಗಳ ಸಭೆ ಕರೆದ ಸಿಎಂ
ಈ ಹಿಂದೆ ಜೆಡಿಎಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ನಾರಾಯಣಗೌಡ ಈಗ ಬಿಜೆಪಿಗೆ ಗುಡ್ ಬೈ ಹೇಳಲಿದ್ದಾರಾ? ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಈ ಮೊದಲು ಜೆಡಿಎಸ್‌ನ ಮಾಜಿ ಸಚಿವರೊಬ್ಬರಿಗೆ ಗಾಳ ಹಾಕಿದ್ದ ಕಾಂಗ್ರೆಸ್, ಇದೀಗ ಬಿಜೆಪಿಯ ನಾಯಕನನ್ನು ತನ್ನತ್ತ ಸೆಳೆಯಲು ಕಸರತ್ತು ನಡೆಸಿದಂತೆ ಕಂಡು ಬರುತ್ತಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿಯೇ ಇವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಗುಮಾನಿ ಎದ್ದಿತ್ತು. ಆದರೆ ಆಗ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಲಹೆಯಿಂದ ಬಿಜೆಪಿಯಲ್ಲೆ ಉಳಿದುಕೊಂಡಿದ್ದರು.
ಪಕ್ಷದ ಅಧಿಕೃತ ಕಾರ್ಯಕ್ರಮಗಳು, ಪ್ರತಿಭಟನೆ ಹಾಗೂ ಸುದ್ದಿಗೋಷ್ಠಿಗಳಿಗೂ ಗೈರಾಗುತ್ತಿರುವ ಮಾಜಿ ಸಚಿವ, ಇತ್ತೀಚೆಗೆ ನಡೆದಿದ್ದ ಕಾವೇರಿ ಹೋರಾಟದಲ್ಲೂ ಕಾಣಿಸಿಕೊಂಡಿರಲಿಲ್ಲ. ಅಲ್ಲದೆ ಜಿಲ್ಲೆಗೆ ಬಿಜೆಪಿ ನಾಯಕರು ಭೇಟಿ ನೀಡಿದಾಗಲೂ, ದೂರ ಉಳಿದಿರುವ ಅವರ ಈ ನಡೆ ಪಕ್ಷ ಬಿಡುವ ಮುನ್ಸೂಚನೆ ಎಂಬ ಮಾತು ಕೇಳಿ ಬರುತ್ತಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.