ವಿಜಯನಗರ : ಬಿಜೆಪಿ ಸೋಲಿನಿಂದ ಹೊಸಪೇಟೆ ಜನ ನೆಮ್ಮದಿಯಿಂದ ಇದ್ದಾರೆ. ಕಳೆದ 15 ವರ್ಷದಿಂದ ಇಲ್ಲಿನ ಜನರು ಉಸಿರು ಬಿಗಿ ಹಿಡಿದಿದ್ದರು. ಕಾಂಗ್ರೆಸ್ ಗೆಲುವಾಗಿರುವುದರಿಂದ ನೆಮ್ಮದಿಯಿಂದ ಉಸಿರಾಡುತ್ತಿದ್ದಾರೆ. ಸದ್ಯ ಭ್ರಷ್ಟಾಚಾರ ಮುಕ್ತ ಹೊಸಪೇಟೆ ಆಗಿದೆ. ಕ್ಷೇತ್ರದ ಎಲ್ಲಾ ಜನರಿಗೂ ಸ್ವಾತಂತ್ರ್ಯ ಸಿಕ್ಕಿದೆ ಎಂದು ಮಾಜಿ ಶಾಸಕ ಆನಂದ್ ಸಿಂಗ್ ವಿರುದ್ಧ ಅವರ ಸಹೋದರಿ ರಾಣಿ ಸಂಯುಕ್ತ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಬಂದು ಪ್ರಚಾರ ಮಾಡಿದರೂ ಇವರಿಗೆ ಗೆಲ್ಲೋದಕ್ಕೆ ಆಗಲೇ ಇಲ್ಲ, ಈ ಆನಂದ್ ಸಿಂಗ್ ವಿರುದ್ಧ ಜನರು ಎಷ್ಟು ಬೇಸರಗೊಂಡಿರದ್ದರು ಎಂದು ಅರ್ಥವಾಗುತ್ತದೆ ಎಂದರು.
ಅವರ ವಿರುದ್ಧ ನನ್ನ ಬಳಿ ದೂರುಗಳು ಕೇಳಿ ಬರುತ್ತಿದ್ದವು. ಫಾರಂ ನಂ.3 ಬೇಕಾದಾಗಲೂ ದುಡ್ಡು ಕೊಡಬೇಕಿತ್ತು. ಬಿಲ್ಡಿಂಗ್ ಕಟ್ಟಬೇಕು ಅಂದಾಗಲೂ ಹಣ ಕೊಡಬೇಕಿತ್ತು. ಅಲ್ಲದೆ ಸ್ವಂತ ಲೇಔಟ್ ಮಾಡಿಕೊಳ್ಳಲು ಜನರು ಎರಡು ಸೈಟ್ ಜೊತೆಗೆ ಹಣವನ್ನು ಅವರಿಗೆ ಕೊಡಬೇಕಿತ್ತು ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ಪ್ರಜಾಪ್ರಭುತ್ವದ ಗಟ್ಟಿತನಕ್ಕೆ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಅಗತ್ಯ : ಯೋಗಿ
ಜನರಿಂದ ಪಡೆದ ಆ ಹಣ ಯಾರ ಕೈಸೇರತಿತ್ತು ಎಂಬುವುದೆ ಗೊತ್ತಾಗುತ್ತಿರಲಿಲ್ಲ, ಅದು ಎಲ್ಲಿ ಹೋಗುತ್ತಿತ್ತು ಎನ್ನುವುದು ಇದುವರೆಗೂ ತಿಳಿದಿಲ್ಲ. ಜನರಿಂದ ನಿರಂತರವಾಗಿ ಕಮಿಷನ್ ರೂಪದಲ್ಲಿ ಹಣ ಹರಿದು ಹೋಗುತ್ತಿತ್ತು. ಕೇಂದ್ರದ ನಾಯಕರು ಬಂದು ಪ್ರಚಾರ ಮಾಡಿದರೂ ಬಿಜೆಪಿ ಗೆಲ್ಲಲಿಲ್ಲ ಇದು ಅವರ ದುರಾಡಳಿತ ಹೇಗಿತ್ತು ಎನ್ನುವುದನ್ನು ತೋರಿಸುತ್ತದೆ ಎಂದು ಕಿಡಿ ಕಾರಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.