ಮೈಸೂರು : ಸಿದ್ದರಾಮಯ್ಯ ಸರ್ಕಾರಕ್ಕೆ ರಾಜ್ಯ ರೈತರ ಹಿತ ಬೇಕಾಗಿಲ್ಲ. ಅವರಿಗೆ ಸ್ಟಾಲಿನ್ ಅವರ ಡಿಎಂಕೆ ಜೊತೆ ಮೈತ್ರಿ ಮುಖ್ಯವಾಗಿದೆ. ಅವರು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸಲುವಾಗಿ ರಾಜ್ಯದ ರೈತರ ಹಿತ ಬಲಿ ಕೊಡುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿಂದು ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡಿಗೆ ನೀರು ಬಿಡಬೇಡಿ, ವಾಸ್ತವ ಸ್ಥಿತಿಯನ್ನು ಸುಪ್ರೀಂಕೋರ್ಟ್ ಮುಂದಿಡಿ ಎಂದು ಸರ್ಕಾರಕ್ಕೆ ನಾನು ಮೊನ್ನೆ ನಡೆದ ಸಭೆಯಲ್ಲಿ ಹೇಳಿದ್ದೆ. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಸ್ಟಾಲಿನ್ ಜೊತೆ ಒಳ್ಳೆಯ ನಂಟಿದೆ. ರಾಜ್ಯದ ಜನ 135 ಸೀಟು ಕೊಟ್ಟಿದ್ದಾರೆ. ಇನ್ನು 5 ವರ್ಷ ಅವರನ್ನು ಯಾರು ಏನು ಮಾಡೋಕ್ಕಾಗಲ್ಲ ಎಂದು ತಿಳಿದಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಇದನ್ನೂ ಓದಿ : ಹಾವೇರಿ ಲೋಕಸಭಾ ಕ್ಷೇತ್ರ : ಟಿಕೆಟ್‌ಗಾಗಿ ಮಾಜಿ ಸಚಿವದ್ವಯರ ಫೈಟ್!
ಇದೇ ತರ ನೀರು ಬಿಟ್ಟರೆ ಬೆಂಗಳೂರು, ಮೈಸೂರು ಹಾಗೂ ಮಂಡ್ಯ ಎಲ್ಲ ಕಡೆಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಬರುತ್ತದೆ. ತಮಿಳುನಾಡಿನಲ್ಲಿ 4 ಲಕ್ಷ ಹೆಕ್ಟೇರ್ ನಲ್ಲಿ ಅಳತೆಗೆ ಮೀರಿದ ಬೆಳೆ ಬೆಳೆದಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ಇದನ್ನು ಮನವರಿಕೆ ಮಾಡಿಕೊಡಬೇಕು. ರಾಜ್ಯಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸರ್ವ ಪಕ್ಷ ಸಭೆಗೆ ಪ್ರಧಾನಿ ಸಮಯ ನೀಡುತ್ತಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ, ಒಬ್ಬ ಜನ ಪ್ರತಿನಿಧಿಗೆ ಸಾಮಾನ್ಯ ಜ್ಞಾನ ಇರಬೇಕು. ಮೋದಿ ಅಲ್ಲ ಮನಮೋಹನ್ ಸಿಂಗ್ ಬಂದರು ಈ ವಿಚಾರದಲ್ಲಿ ಏನು ಮಾಡಲು ಆಗುವುದಿಲ್ಲ. ಕಾವೇರಿ ನಿರ್ವಹಣಾ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ನಲ್ಲಿ ತೀರ್ಮಾನ ಆಗಬೇಕು ಎಂದು ಕುಟುಕಿದರು.
ಸಿದ್ದರಾಮಯ್ಯ ಅವರು ಮೋದಿ ಬದಲು ಸ್ಟಾಲಿನ್ ಅವರಿಗೆ ಕರೆ ಮಾಡಲಿ. ನೀರು ಬಿಡೋದಕ್ಕೆ ಆಗಲ್ಲ ಎಂದು ಹೇಳಲಿ. ಇವರಿಗೆ ಲೋಕಸಭಾ ಚುನಾವಣೆ ಮುಖ್ಯನಾ? ರಾಜ್ಯದ ಜನರ ಹಿತಸಾಕ್ತಿ ಮುಖ್ಯನಾ? ಎಂದು ಪ್ರತಾಪ್ ಸಿಂಹ ಆಕ್ರೋಶಿತರಾದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.