ಬೆಂಗಳೂರು: ಮುಂದಿನ ತಿಂಗಳಿನಿಂದ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಜೊತೆಗೆ ರಾಗಿ ಮಾಲ್ಟ್ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ನಗರದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಶಾಲಾ ಮಕ್ಕಳಿಗೆ ಈಗಾಗಲೇ ಎರಡು ಮೊಟ್ಟೆಗಳನ್ನು ವಿತರಿಸಲು ಪ್ರಾರಂಭಿಸಿದ್ದು, ಇದು ವಿದ್ಯಾರ್ಥಿಗಳ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಹೀಗಾಗಿ ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಿಸಲು ಮುಂದಿನ ತಿಂಗಳಿನಿಂದ ವಿದ್ಯಾರ್ಥಿಗಳಿಗೆ ರಾಗಿ ಮಾಲ್ಟ್ ನೀಡುತ್ತೇವೆ, ಈ ಯೋಜನೆಗೆ ಸಿಎಂ ಸಿದ್ದರಾಮಯ್ಯ ಡಿಸೆಂಬರ್‌ನಲ್ಲಿ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬಿಜೆಪಿಗೆ ಮಾಜಿ ಸಂಸದೆ ವಿಜಯಶಾಂತಿ ರಾಜೀನಾಮೆ: ಮರಳಿ ಕಾಂಗ್ರೆಸ್ ಸೇರ್ಪಡೆ ಸಂಭವ!
ಈಗಾಗಲೇ ರಾಗಿ ಮಾಲ್ಟ್ ನ್ನು ಪ್ರಾಯೋಗಿಕವಾಗಿ ನೀಡುತ್ತಿದ್ದು, ಇದನ್ನು ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಶಾಲಾ ಮಕ್ಕಳಿಗೂ ವಿಸ್ತರಿಸಲಾಗುವುದು. ಶಾಲೆಯಲ್ಲೇ ಇದನ್ನು ತಯಾರಿಸಲಾಗುತ್ತಿದ್ದು, ಇದಕ್ಕೆ ಬೇಕಾದ ರಾಗಿ ಹಿಟ್ಟನ್ನು ಶಾಲೆಗಳಿಗೆ ಪೂರೈಸಲಾಗುತ್ತದೆ ಎಂದರು.
ಇನ್ನೂ ಮುಂದಿನ ಮೂರು ವರ್ಷಗಳಲ್ಲಿ 3,000 ಕರ್ನಾಟಕ ಸಾರ್ವಜನಿಕ ಶಾಲೆಗಳನ್ನು (ಕೆಪಿಎಸ್) ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಯೋಚಿಸುತ್ತಿದ್ದು, ಅಜೀಂ ಪ್ರೇಮ್‌ಜಿ ಫೌಂಡೇಶನ್‌ನೊಂದಿಗೆ ಮಾತುಕತೆ ನಡೆಸಲಾಗ್ತಿದೆ ಜೊತೆಗೆ 600 ಕೋಟಿ ರೂಪಾಯಿ ವೆಚ್ಚವನ್ನು ಅಂದಾಜಿಸಲಾಗಿದೆ ಎಂದು ವಿವರಿಸಿದ್ದಾರೆ.
ಮನರೇಗಾ ಯೋಜನೆಯಲ್ಲಿ 7,100 ಶೌಚಾಲಯಗಳ ನಿರ್ಮಾಣ, ಶಾಲೆಗಳಲ್ಲಿ 7,311 ಹೆಚ್ಚುವರಿ ಕೊಠಡಿಗಳ ನಿರ್ಮಾಣ ಸೇರಿದಂತೆ 13,000 ಶಿಕ್ಷಕರ ನೇಮಕಾತಿ ರಾಜ್ಯದ ಶಿಕ್ಷಣದ ಗುಣಮಟ್ಟ ಸುಧಾರಿಸಲು ಸರ್ಕಾರ ಹಜ್ಜೆ ಇಟ್ಟಿದೆ ಎಂದರು.