ಬೆಂಗಳೂರು: ಕೋವಿಡ್ ಹೆಸರಿನಲ್ಲಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕುರಿತು ತನಿಖೆ ನಡೆಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಈ ಎರಡು ಇಲಾಖೆಗಳು ಕೋವಿಡ್ ನಿಯಂತ್ರಣಕ್ಕಾಗಿ ಔಷಧ ಹಾಗೂ ಉಪಕರಣಗಳನ್ನು ಖರೀದಿಸಿರುವ ಸಂಬಂಧ ಸಾರ್ವಜನಿಕ ಲೆಕ್ಕಪತ್ರ ಸಮಿತಿ ನೀಡಿರುವ ವರದಿಯಲ್ಲಿ ಗಂಭೀರವಾದ ಆರೋಪಗಳ ಬಗ್ಗೆ ವಿವರಿಸಲಾಗಿದೆ. ಹೀಗಾಗಿ, ಈ ಪ್ರಕರಣವನ್ನು ತನಿಖೆ ನಡೆಸಲು ಆಯೋಗ ರಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.
ಮೂರು ತಿಂಗಳೊಳಗೆ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಹಾಗೂ ಸಮಗ್ರ ಮಾಹಿತಿ, ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆಗಳು ಸಲ್ಲಿಸಬೇಕು. ಆಯೋಗದ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಲು ಅನುಕೂಲ ಆಗುವಂತೆ ಆಯೋಗದ ನ್ಯಾಯಮೂರ್ತಿ, ಕಾರ್ಯದರ್ಶಿ ಹಾಗೂ ಅಧಿಕಾರಿ, ಸಿಬ್ಬಂದಿಗೆ ವಾಹನ, ಪೀಠೋಪಕರಣ ಮತ್ತಿತರ ಸೌಲಭ್ಯವನ್ನು ಆರೋಗ್ಯ ಇಲಾಖೆಯ ಆಯುಕ್ತರು ಒದಗಿಸಬೇಕು ಎಂದು ಸರ್ಕಾರ ಸೂಚಿಸಿದೆ.
ಸದನದಲ್ಲಿ ಆರೋಪಿಸಿದ್ದ ಶಾಸಕ ಪ್ರದೀಪ್ ಈಶ್ವರ್: ಕೋವಿಡ್ ಸಂದರ್ಭದಲ್ಲಿ ಸುಮಾರು 2 ಸಾವಿರ ಕೋಟಿ ರೂಪಾಯಿಗಳಷ್ಟು ಭಾರಿ ಅಕ್ರಮ ನಡೆದಿದೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ವಿಧಾನಸಭೆಯಲ್ಲಿ ಆರೋಪ ಮಾಡಿದ್ದರು.
ಕೋವಿಡ್ ಸಮಯದಲ್ಲಿ ಬಿಜೆಪಿಯ ಕೆ.ಸುಧಾಕರ್ ಅವರು ಆರೋಗ್ಯ ಸಚಿವರಾಗಿದ್ದರು. ಈ ವೇಳೆ ತನ್ನ ಕ್ಷೇತ್ರದವರೇ ಆದ ಹಾಗೂ ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ತನ್ನ ಎದುರಾಳಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕೆ.ಸುಧಾಕರ್ ಅವರ ಅವಧಿಯಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂದು ಪ್ರದೀಪ್ ಈಶ್ವರ್ ಸದನದಲ್ಲಿ ದೂರಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.