ಬೆಂಗಳೂರು : ಕನಕ ಗುರು ಪೀಠ ಮಾಡಿದ್ದು ನಾನು, ಈಗ ಯಾರ್ಯಾರೋ ಅದರ ರಾಜಕೀಯ ಲಾಭ ಪಡೆಯುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪರೋಕ್ಷವಾಗಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪಗೆ ಟಾಂಗ್ ನೀಡಿದರು. ನಗರದ ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ಮಂಜುನಾಥ ನಗರದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅನಾವರಣಗೊಳಿಸಿ ಮಾತನಾಡಿದರು.
ಅಧಿಕಾರದಲ್ಲಿದ್ದಾಗ ಚೆನ್ನಮ್ಮನ ಜಯಂತಿ, ಕೆಂಪೇಗೌಡ ಜಯಂತಿ, ಕೆಂಪೇಗೌಡ ವಿಮಾನ ನಿಲ್ದಾಣವೆಂದು ಹೆಸರು ಬದಲಾವಣೆ ಮಾಡಿದ್ದು, ಬಸವಣ್ಣನ ಫೋಟೋವನ್ನು ಸರ್ಕಾರಿ ಕಚೇರಿಯಲ್ಲಿ ಹಾಕಿಸಿದ್ದು ನಾನು ಎಂದರು. ಬಿಜೆಪಿ ರಾಜಕೀಯ ದ್ವೇಷ ಹೊತ್ತಿಸುತ್ತಿದ್ದು, ಸರ್ವಜನಾಂಗದ ಶಾಂತಿ ತೋಟ ಅಂತ ಕುವೆಂಪು ಹೇಳಿದ್ದರು. ಆದರೆ ಜಾತಿ ಜಾತಿಗಳ ನಡುವೆ ಜಗಳ ಹಚ್ಚುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನನಗೆ ಮತ್ತೊಮ್ಮೆ ಅವಕಾಶ ಸಿಕ್ಕಿದರೆ ಕನಕ ಭವನಕ್ಕೆ ಎಷ್ಟು ಬೇಕೋ ಅಷ್ಟು ದುಡ್ಡು ಕೊಡುತ್ತೇನೆ. ನಿಮ್ಮ ಆಶೀರ್ವಾದ ನನ್ನ ಮೇಲಿರಲಿ, ನಾನು ಕಳೆದ 40 ವರ್ಷಗಳಿಂದ ರಾಜಕೀಯ ಜೀವನದಲ್ಲಿ ಶಾಸಕನಾಗಿ, ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ತಮ್ಮೆಲ್ಲರ ಆಶೀರ್ವಾದ ಕಾರಣ. ಅಂಥಾ ಅವಕಾಶ ಮತ್ತೊಮ್ಮೆ ಸಿಕ್ಕಿದರೆ ನಿಮ್ಮ ಎಲ್ಲಾ ಬೇಡಿಕೆ ಪೂರ್ತಿಗೊಳಿಸುವ ಕೆಲಸ ಮಾಡುತ್ತೇನೆ ಎಂದರು.
ಪ್ರತಿಮೆ ನಿರ್ಮಾಣ ಮಾಡಿದರೆ ಸಾಲದು. ಅವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ಅವರಂತೆಯೇ ದೇಶಪ್ರೇಮಿಯಾದಾಗ ಮಾತ್ರ ಸಾರ್ಥಕ ಭಾವ ಮೂಡುತ್ತದೆ. ಪ್ರತೀ ಮನೆಯಲ್ಲಿ ಒಬ್ಬ ದೇಶಪ್ರೇಮಿ ಹುಟ್ಟಬೇಕು ಎಂಬುದು ರಾಯಣ್ಣ ಬಯಕೆ ಆಗಿತ್ತು. ನಾಡಿನ ನೆಲ, ಜಲ, ಭಾಷೆಯ ರಕ್ಷಣೆಗೆ ನಾವೆಲ್ಲ ರಾಯಣ್ಣ ಅವರಂತೆ ಸಿದ್ಧರಾಗಬೇಕು ಎಂಬ ಕಾರಣಕ್ಕೆ ಇಂಥಾ ಮಹಾನ್ ವ್ಯಕ್ತಿಗಳ ಪ್ರತಿಮೆ ಸ್ಥಾಪನೆ ಮಾಡುವಲಾಗಿದೆ ಎಂದರು. ಈ ವೇಳೆ ಸಿದ್ದರಾಮಯ್ಯನವರಿಗೆ ಜೋಳದ ದೊಡ್ಡಹಾರವನ್ನು ಹಾಕಿ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು.