ಮಂಗಳೂರು : ಅಖಂಡವಾಗಿದ್ದ ಭಾರತದಿಂದ ಅನೇಕ ದೇಶಗಳು ಪ್ರತ್ಯೇಕವಾಗಿವೆ. ಹಾಗಾಗಿ ಭಾರತ್ ಜೋಡೋ ಯಾತ್ರೆ ಬಗ್ಗೆ ಅಪವಾದ ಮಾಡುವವರು ತಮ್ಮ ಮೆರವಣಿಗೆಯನ್ನು ಬರ್ಮಾ, ಬಾಂಗ್ಲಾದೇಶ ಸೇರಿದಂತೆ ಅಖಂಡವಾಗಿದ್ದ ಇತರ ದೇಶಗಳಲ್ಲಿ ಹೋಗಿ ನಡೆಸಲಿ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಯಾರೂ ಯಾತ್ರೆ ತಡೆಯಲಾರರು. ಬಿಜೆಪಿಯವರ ಟೀಕೆಗೆ ಅವರದ್ದೇ ಧ್ವನಿಯಲ್ಲಿ ಉತ್ತರ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ, ಭಾರತ್ ಜೋಡೋ ಯಾತ್ರೆಯನ್ನು ಟೀಕೆ ಮಾಡಿ, ಯಾತ್ರೆ ಪಾಕಿಸ್ತಾನಕ್ಕೆ ಹೋಗಿ ಮಾಡಲಿ ಎನ್ನುವ ಬಿಜೆಪಿಯವರು ತಮ್ಮ ಅಖಂಡ ಭಾರತ ದೊಂದಿ ಮೆರವಣಿಗೆಯನ್ನು ಪಾಕಿಸ್ತಾನದ ಸಹಿತ ಅಖಂಡವಾಗಿದ್ದ ಇತರ ದೇಶಗಳಲ್ಲೂ ನಡೆಸಲಿ ಎಂದರು.
ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯುವ ಶಕ್ತಿಗಳ ವಿರುದ್ಧ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡಿದ್ದಾರೆ. ಯಾತ್ರೆ ಇದೀಗ ತೆಲಂಗಾಣ ಪ್ರವೇಶಿಸಿದ್ದು, ಪಾದಯಾತ್ರೆಯುದ್ದಕ್ಕೂ ಎಲ್ಲಾ ವರ್ಗದ ಜನ ಅವರನ್ನು ಸ್ವಾಗತಿಸುವ ಮೂಲಕ ಯಶಸ್ವಿಯಾಗಿ ಸಾಗುತ್ತಿದೆ. ರಾಹುಲ್‌ರವರು ತಮ್ಮ ಯಾತ್ರೆಯುದ್ದಕ್ಕೂ ಪ್ರೀತಿ ತೋರಿಸುತ್ತಿದ್ದಾರೆ. ಆದರೆ ಬಿಜೆಪಿಯವರು ರಥಯಾತ್ರೆ ಮಾಡಿ ರಕ್ತದೋಕುಳಿ ಹರಿಸಿದ್ದರು ಎಂದು ಆರೋಪಿಸಿದರು.
ಹಿರಿಯ ಕಾಂಗ್ರೆಸ್ ನಾಯಕ, ರಾಜ್ಯ ಸಭೆಯ ವಿಪಕ್ಷ ನಾಯಕನಾಗಿ ಕಾರ್ಯ ನಿರ್ವಹಿಸಿರುವ ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುವ ಬಗ್ಗೆ ಸಿಟಿ ರವಿ ಕೇವಲವಾಗಿ ಮಾತನಾಡಿದ್ದಾರೆ. ಖರ್ಗೆಯವರು ಲೈಫ್ ಜಾಕೆಟ್ ಹಾಕಿಕೊಂಡು ಕೆಲಸ ಮಾಡಬೇಕೆಂದು ಹೇಳಿಕೆ ನೀಡಿದ್ದಾರೆ. ರಾಜಕೀಯಲ್ಲಿ ಮೊನ್ನೆಯಷ್ಟೇ ಕಣ್ಣು ಬಿಟ್ಟಿರುವ ಸಿಡಿ ರವಿಗೆ ಖರ್ಗೆ ಬಗ್ಗೆ ಮಾತನಾಡುವ ಯಾವುದೇ ಯೋಗ್ಯತೆ ಇಲ್ಲ ಎಂದು ಹೇಳಿದರು.