ಚಾಮರಾಜನಗರ: ಬಿರ್ಸಾ ಮುಂಡಾ ಆದಿವಾಸಿಗಳಿಗೆ ದೇವರಂತೆ ಇದ್ದವರು, ಇಂದು ರಾಜ್ಯಾದ್ಯಂತ ಅವರ ಜಯಂತಿ ಕಾರ್ಯಕ್ರಮ ನಡೆಯುತ್ತಿವೆ. ಈ ಕಾರ್ಯಕ್ರಮಕ್ಕೆ ಸಿಎಂ ಅವರೂ ಬರಬೇಕಿತ್ತು. ಕೆಲಸದ ಒತ್ತಡದಿಂದ ಸಿಎಂ ಬರಲು ಸಾಧ್ಯವಾಗಿಲ್ಲ ಎಂದು ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮನ್ನು, ಎಲ್ಲಾ ಶಾಸಕರನ್ನು ಕಳುಹಿಸಿ ಕಾರ್ಯಕ್ರಮ ಯಶಸ್ಸುಗೊಳಿಸಲು ಸಿಎಂ ಹೇಳಿದ್ದಾರೆ ಎಂದರು.
ವಿಶೇಷವಾಗಿ ಚಾಮರಾಜನಗರ ಎಂದರೆ ಸುಂದರ ತಾಣ. ಅದನ್ನು ಮೂಢನಂಬಿಕೆ, ಅಪನಂಬಿಕೆ ಯಿಂದ ಕೆಟ್ಟ ಹೆಸರು ತಂದಿದ್ದಾರೆ. ನಮ್ಮ ಸಿಎಂ ಆಗಲಿ, ಕಾಂಗ್ರೆಸ್ ಪಕ್ಷದವರಾಗಲೀ ಅದನ್ನು ನಂಬುವುದಿಲ್ಲ. ಹೀಗಾಗಿಯೇ ಇಲ್ಲಿ ನಾವು ಯಶಸ್ವಿಯಾಗಿ ಕಾರ್ಯಕ್ರಮ ನಡೆಸುತ್ತೇವೆ. ಆ ಮೂಲಕ ನಮ್ಮ ಕಾಂಗ್ರೆಸ್‌ಗೆ ಗಟ್ಟಿ ಬುನಾದಿ ಹಾಕುತ್ತೇವೆ ಎಂದು ಹೇಳಿದರು.
ʼವಿಜಯೇಂದ್ರ ಅಧ್ಯಕ್ಷರಾಗಿದ್ದಕ್ಕೆ ಲಿಂಗಾಯತರು ಬಿಜೆಪಿ ಕಡೆ ಹೋಗುವುದಿಲ್ಲ’
ಲಿಂಗಾಯತ ನಾಯಕ ವಿಜಯೇಂದ್ರ ಬಿಜೆಪಿ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನಲ್ಲಿ ಅನೇಕ ಲಿಂಗಾಯತ ನಾಯಕರಿದ್ದಾರೆ. ಲಿಂಗಾಯತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಗೆ ಗಟ್ಟಿ ಬುನಾದಿಯಾಗಿದ್ದಾರೆ ವಿಜಯೇಂದ್ರ ಅಧ್ಯಕ್ಷರಾದ ಕಾರಣಕ್ಕೆ ಲಿಂಗಾಯತರು ಬಿಜೆಪಿ ಕಡೆ ಹೋಗುವುದಿಲ್ಲ. ವಿಜಯೇಂದ್ರ ಆಯ್ಕೆ ವಿಚಾರದಲ್ಲಿ ಅವರ ಪಕ್ಷದಲ್ಲೇ ಗೊಂದಲವಿದೆ. ಬಿಜೆಪಿ ಪಕ್ಷದಲ್ಲೇ ವಿಜಯೇಂದ್ರ ಆಯ್ಕೆ ವಿಚಾರದಲ್ಲಿ ವಿರೋಧ ಇದೆ ಅದು ಬಿಜೆಪಿ ಪಕ್ಷದವರ ಆಂತರಿಕ ವಿಚಾರ ಎಂದು ತಿಳಿಸಿದರು.
ಇದನ್ನೂ ಓದಿ: ‘ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು’ ಸೇವೆ ಬೆಳಗಾವಿಯವರೆಗೆ ವಿಸ್ತರಣೆ, ರೈಲ್ವೆ ಸಚಿವಾಲಯ ಆದೇಶ
ಅವರು ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ. ಅವರ ವಿಚಾರವಾಗಿ ನಾವು ಮಾತನಾಡುವುದಿಲ್ಲ ಆದರೆ ಚುನಾವಣೆಯಲ್ಲಿ ನೇರ ಹಣಾಹಣಿ ಇರುತ್ತದೆ. 28 ಸ್ಥಾನದಲ್ಲಿ ಕನಿಷ್ಟ 25ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಡಿಕೆಶಿಗೆ ಪ್ರಾಣ ಬೆದರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಬೆಳೆಯುತ್ತಿರುವ ನಾಯಕರ ಬಗ್ಗೆ ಬೆದರಿಕೆ ಹಾಕುವುದು ಸಾಮಾನ್ಯ ಸಂಗತಿ. ನಮ್ಮ ನಾಯಕ ರಾಹುಲ್ ಗಾಂಧಿಯವರನ್ನೇ ಬಿಟ್ಟಿಲ್ಲ, ಇದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸುತ್ತಾರೆ ಎಂದರು.
ಹೆಚ್.ಡಿ.ಕೆ ವಿದ್ಯುತ್ ಕಳ್ಳತನ ಆರೋಪ ವಿಚಾರವಾಗಿ ಮಾತನಾಡಿದ ಅವರು, ಇದರ ಬಗ್ಗೆ ನಮ್ಮ ನಾಯಕರು ಪ್ರತಿಕ್ರಿಯಿಸಿದ್ದಾರೆ. ಈ ವಿಚಾರದಲ್ಲಿ ನಾನು ಏನೂ ಹೇಳುವುದಿಲ್ಲ ಎಂದು ತಿಳಿಸಿದರು. ಭಾರತ- ನ್ಯೂಜಿಲೆಂಡ್ ಸೆಮಿಫೈನಲ್‌ಗೆ ಶುಭಕೋರಿದ ಅವರು, ಟೀಂ ಇಂಡಿಯಾ ಗೆದ್ದೇ ಗೆಲ್ಲಲ್ಲಿದೆ, ಅವರ ವೇಗ ನೋಡ್ತಾ ಇದ್ರೆ ಖಂಡಿತಾ ವಿಶ್ವಕಪ್ ನಮ್ಮದೇ , ಇಂದು ವಿಜಯೋತ್ಸವವನ್ನು ಕೂಡ ನಾವು ಆಚರಿಸುತ್ತೇವೆ . ಮುಂದೆ ಫೈನಲ್ ನಲ್ಲೂ ವಿಜಯೋತ್ಸವ ಆಚರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.