ಬೆಂಗಳೂರು: ದಲಿತರ ಪಾಲಿನ ಹಣ ಲೂಟಿ ಹೊಡೆಯುತ್ತಿರುವ ಬಿಜೆಪಿ ಸರ್ಕಾರ ದಲಿತರ ಏಳಿಗೆ, ಅಭಿವೃದ್ಧಿಗೆ ಮಣ್ಣು ಹಾಕುತ್ತಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವಿಚಾರವಾಗಿ ವರದಿಗೆ ಪ್ರತಿಕ್ರಿಯಿಸಿ, ಸಾಸಿವೆ ಇಲ್ಲದ ಮನೆ ಇಲ್ಲ, ಬಿಜೆಪಿ ಹಗರಣ ನಡೆಸದ ಇಲಾಖೆ ಇಲ್ಲ. ಭ್ರಷ್ಟಾಚಾರವು ಬಿಜೆಪಿಯ ಕಣ ಕಣದಲ್ಲೂ ಅಡಕವಾಗಿದೆ ಎಂದು ಲೇವಡಿ ಮಾಡಿದೆ.
ಭ್ರಷ್ಟಾಚಾರವು ಬಿಜೆಪಿಯ ಕಣ ಕಣದಲ್ಲೂ ಅಡಕವಾಗಿದೆ. ನಾವು ಆರೋಪಿಸಿದ್ದ ಅಂಬೇಡ್ಕರ್ ನಿಗಮದ ಹಗರಣ ಇಲಾಖೆಯ ಪ್ರಾಥಮಿಕ ತನಿಖೆಯಲ್ಲೇ ಬಹಿರಂಗವಾಗಿದೆ ಎಂದು ಹೇಳಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಹಣದಲ್ಲಿ ಸಚಿವರು, ಅಧಿಕಾರಿಗಳ ಮೋಜು ಮಸ್ತಿಗೆ ಬಳಕೆ ಮಾಡುವ ಬಿಜೆಪಿಗೆ ಅಲ್ಲಿನ ಜನರ ಅಭಿವೃದ್ಧಿ ಬೇಕಿಲ್ಲ.
ಕೆಕೆಆರ್’ಡಿಬಿಗೆ ಹಣ ನೀಡಿದ್ದೇ ಕಡಿಮೆ, ಆ ಹಣ ಖರ್ಚು ಮಾಡಿದ್ದೂ ಕಡಿಮೆ, ಆ ಖರ್ಚಿನಲ್ಲಿ ಅಭಿವೃದ್ಧಿಯ ಬದಲು ಪ್ರವಾಸಕ್ಕೆ ಬಳಕೆ ಮಾಡಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ಇನ್ನೆಷ್ಟು ಅನ್ಯಾಯ ಮಾಡುವಿರಿ ಬಿಜೆಪಿಯವರೇ?
ಸರ್ಕಾರದ ಆದೇಶ ಉಲ್ಲಂಘಿಸಿ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಐದು ಸಾವಿರ ಫಲಾನು ಭವಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ನೇರ ಸಾಲ ಯೋಜನೆಯಡಿ ತಲಾ ₹ 50 ಸಾವಿರ ಮಂಜೂರು ಮಾಡಿ ₹ 25 ಕೋಟಿ ಅಕ್ರಮ ಎಸಗಿರುವುದೂ ಸೇರಿದಂತೆ ಭಾರಿ ಭ್ರಷ್ಟಾಚಾರ ನಡೆಸಿರುವುದು ಇಲಾಖೆಯ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ ಎಂದಿದೆ.