ಬೆಂಗಳೂರು: ಗೃಹ ಲಕ್ಷ್ಮಿ ಯೋಜನೆಯಲ್ಲಿ ನನಗೆ ಯಾವುದೇ ರೀತಿಯ ನ್ಯೂನತೆ ಕಾಣ್ತಿಲ್ಲ; ಈ ಭಾಗದ ಶಾಸಕನಾಗಿ ಫಲಾನುವಿಗಳಿಗೆ ಯೋಜನೆ ತಲುಪಿಸುತ್ತಿದ್ದೇನೆ. ನಾಳೆ ಗೃಹಲಕ್ಷ್ಮೀ ಯೋಜನೆ ನಮಗೆ ಬಂದಿಲ್ಲ ಅಂತ ಜನರು ನನ್ನನ್ನು ಕೇಳಬಹುದು. ಹೀಗಾಗಿ, ಅದು ಬಿಜೆಪಿ, ಇದು ಕಾಂಗ್ರೆಸ್ ಯೋಜನೆ ಅಂತ ಹೇಳೋಕೆ ಆಗಲ್ಲ. ಶಾಸಕನಾಗಿ ಸರ್ಕಾರದ ಯಾವುದೇ ಯೋಜನೆ ಇದ್ರೂ ಜನರಿಗೆ ತಲುಪಿಸುವ ಕೆಲಸ ಮಾಡುತ್ತೇನೆ ಎಂದು ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ಹೇಳಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರದ ರಾಮೋಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಇದು ಸರ್ಕಾರದ ಕಾರ್ಯಕ್ರಮ, ಎಲ್ಲ ವಾರ್ಡ್ ಗಳಲ್ಲಿ ಕಾರ್ಯಕ್ರಮ ಮಾಡಲು ಅಧಿಕಾರಿಗಳು ಹೇಳಿದ್ದರು. ಸರ್ಕಾರದ ಈ ಕಾರ್ಯಕ್ರಮವನ್ನು 94 ಸಾವಿರ ಕಾರ್ಡುದಾರರಿಗೆ ತಲುಪಬೇಕು. ಎರಡು ದಿನದ ಬಳಿಕ ಪ್ರತಿ ಪಂಚಾಯತ್‌ನಲ್ಲೂ ಜನರನ್ನು ಸಂಪರ್ಕಿಸಿ ತಲುಪಿಸಬೇಕು’ ಎಂದು ಹೇಳಿದರು.
ಇದು ಯಡಬಿಡಂಗಿ ಯೋಜನೆ ಎಂಬ ಬೊಮ್ಮಾಯಿ ಹೇಳಿಕೆಗೆ ಪ್ರತ್ಯುತ್ತರಿಸಿ, ‘ದೊಡ್ ದೊಡ್ಡವರು ಏನ್ ಬೇಕಾದರೂ ಮಾಡ್ಲಿ, ಇದು ನನ್ನ ಕ್ಷೇತ್ರ. ನಮ್ಮ ಲೀಡರ್ ಗಳ ಸಭೆ ಮಾಡಿದ್ದೇನೆ. ಇದು ಸರ್ಕಾರದ ಯೋಜನೆಯಾಗಿದ್ದು, ಕ್ಷೇತ್ರದ 94 ಸಾವಿರ ಮಹಿಳೆಯರಿಗೆ ಈ ಯೋಜನೆಯಿಂದ ಹಣ ಸಿಗುತ್ತದೆ. ಜನರಿಗೆ ತಲುಪಲು ಯಾವೆಲ್ಲ ಕ್ರಮ ವಹಿಸಬೇಕೋ ಅದನ್ನೆಲ್ಲಾ ಲೀಡರ್ ಗಳಿಗೆ ಹೇಳಿದ್ದೇನೆ; ಅದರ ಪ್ರಕಾರ ಕಾರ್ಯಕ್ರಮ ಮಾಡುತ್ತಿದ್ದೇವೆ’ ಎಂದು ಹೇಳಿದರು.
ಇದನ್ನೂ ಓದಿ; ನಮ್ಮ ಯೋಜನೆಗಳಿಗೆ ಬಿಜೆಪಿ ಅವ್ರು ಸುಣ್ಣಬಣ್ಣ ಹಾಕುತ್ತಾರಷ್ಟೇ; ಖರ್ಗೆ
ಆಪ್ತರಿಗೆ ಟಿಕೆಟ್ ಕೊಟ್ಟರೆ ಬೆಂಬಲಿಗರನ್ನು ವಾಪಸ್ ಬಿಜೆಪಿಗೆ ಕರೆದುಕೊಂಡು ಬರುತ್ತೇನೆ ಎಂಬ ವಿಚಾರದ ಬಗ್ಗೆ ಮಾತನಾಡಿ, ‘ಅದು ಅವರವರ ಇಷ್ಟ, ಮೂರು ವರ್ಷದಿಂದ ಬಿಬಿಎಂಪಿ ಎಲೆಕ್ಷನ್ ನಡೆದಿಲ್ಲ. ಈ ಸಾರಿ ಹೆಚ್ಚು ಕಡಿಮೆ ಆದರೆ ಇನ್ನೂ ಐದು ವರ್ಷ ಅನುಭವಿಸಬೇಕಾಗುತ್ತದೆ. ಆಡಳಿತ ಪಕ್ಷಕ್ಕೆ ಮೀಸಲಾತಿ ವಿಂಗಡಿಸಲು ಅನುಕೂಲ ಆಗುತ್ತೆ ಎನ್ನುವವರು ಕೆಲವರು ಇದ್ದಾರೆ. ಅಂತವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ, ಅದನ್ನು ನಾನು ತಪ್ಪು ಅಂತ ಹೇಳಲ್ಲ’ ಎಂದರು.
‘ಚುನಾವಣೆ ಸಮೀಪಿಸಿದಾಗ ಪಕ್ಷಾಂತರ ಸಾಮನ್ಯ, ಹತ್ತು ಹದಿನೈದು ಜನ ಹೋಗಿದ್ದಾರೆ. ಸಾವಿರಾರು ಜನ ಇನ್ನೂ ನಮ್ಮ ಜೊತೆಗಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಎಂಬ ಭೇದಬಾವವಿಲ್ಲ. ಚುನಾವಣೆ ಸಂದರ್ಭದಲ್ಲಿ ನನ್ನ ಪಾರ್ಟಿ ನನಗೆ, ಅವರ ಪಾರ್ಟಿ ಅವರಿಗೆ. ಚುನಾವಣೆ ಮುಗಿದ ಮೇಲೆ ಪಕ್ಷ ಭೇದ ಇಲ್ಲ’ ಎಂದು ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.