ಬೆಂಗಳೂರು: ‘ನಾವು ಇವತ್ತಿನವರೆಗೂ ಸಂಧಾನ ಸೂತ್ರ ಮಾಡಿಲ್ಲ; ಸುಪ್ರೀಂ ಕೋರ್ಟ್ ಮತ್ತು ಪ್ರಾಧಿಕಾರ ಎರಡು ಕಡೆ ಕೂಡ ರಾಜ್ಯದ ಪರ ಸಮರ್ಥ ವಾದ ಮಂಡಿಸುತ್ತೇವೆ. ಮೇಕೆದಾಟಿನಲ್ಲಿ ಡ್ಯಾಂ ಕಟ್ಟಬೇಕು, ಇಂತಹ ಸಂಕಷ್ಟ ಪರಿಸ್ಥಿತಿ ಬಂದಾಗ ಅದನ್ನು ಬಳಸಿಕೊಳ್ಳಬಹುದು. ತಮಿಳುನಾಡಿಗೂ ಅದರ ಪಾಲಿನ ನೀರು ಬಿಡಬಹುದು. ಯಾವುದೇ ಕಾರಣಗಳಿಲ್ಲದೇ ತಮಿಳುನಾಡು ಮೇಕೆದಾಟು ವಿರೋಧಿಸುತ್ತಿದೆ; ಒಂದು ಮೇಕೆದಾಟು ಆಗಬೇಕು ಅಥವಾ ಸಂಧಾನ ಸೂತ್ರವಾಗಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸರ್ವಪಕ್ಷಗಳ ಮುಖಂಡರ ಸಭೆ ನಂತರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಕಾವೇರಿ, ಮೇಕೆದಾಟು, ಮಹದಾಯಿ ಸೇರಿದಂತೆ ರಾಜ್ಯದ ಜಲವಿವಾದದ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳು, ಸರ್ವ ಪಕ್ಷದ ಮುಖಂಡರು, ಶಾಸಕರು, ಸಂಸದರು ಭಾಗಿಯಾಗಿದ್ದರು. ನಮ್ಮ ಕಾನೂನು ತಂಡದ ಸದಸ್ಯರು ಕೂಡ ಸಭೆಯಲ್ಲಿ ಭಾಗಹಿಸಿದ್ದರು. ಕರ್ನಾಟಕ ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿ, ವಸ್ತು ಸ್ಥಿತಿಯನ್ನ ಸಭೆಯಲ್ಲಿ ಡಿಸಿಎಂ ಡಿಕೆಶಿವಕುಮಾರ್ ವಿವರಿಸಿದರು’ ಎಂದರು.
ಇದನ್ನೂ ಓದಿ; ‘ಇದು ಸರ್ವಪಕ್ಷಗಳ ಸಭೆಯಲ್ಲ, ರಾಜ್ಯವನ್ನು ಲೂಟಿ ಹೊಡೆದಿರುವ ಪಕ್ಷಗಳ ಸಭೆ’
‘ಕಾನೂನಿನ ದೃಷ್ಟಿಯಿಂದ ಏನೇನಾಗಿದೆ ಎಂದು ಅಡ್ವೋಕೇಟ್ ಜನರಲ್ ವಿವರಿಸಿದರು. ಮಾಜಿ ಮುಖ್ಯಮಂತ್ರಿಗಳು ತಮ್ಮ ಅಭಿಪ್ರಾಯ ಹೇಳಿದ್ದಾರೆ’ ಎಂದು ಸಿದ್ದರಾಮಯ್ಯ ಸಭೆಯ ಬಗ್ಗೆ ಮಾಹಿತಿ ನೀಡಿದರು.
‘ರಾಜ್ಯದ ಪರ ನಿಲುವು ತೆಗೆದುಕೊಳ್ಳುವಾಗ ರಾಜಕೀಯ ಮಾಡಲ್ಲ; ಕನ್ನಡ ನಾಡಿನ ಹಿತದೃಷ್ಟಿಯಿಂದ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಬೆಂಬಲ ನೀಡುತ್ತೇವೆ ಎಂದು ವಿಪಕ್ಷ ನಾಯಕರು ಹೇಳಿದ್ದಾರೆ’ ಎಂದರು.
‘ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದೆ; ಹಲವು ಜಲಾನಯನ ಪ್ರದೇಶದಲ್ಲಿ ಈ ಬಾರಿ ಮಳೆ ಬಂದಿಲ್ಲ. ಕೆ ಆರ್ ಎಸ್, ಹೇಮಾವತಿ, ಹಾರಂಗಿ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ’ ಎಂದು ಹೇಳಿದರು.
‘ಕಾವೇರಿ ಹಾಗೂ ರಾಜ್ಯದ ಜಲವಿವಾದಗಳ ಬಗ್ಗೆ ಚರ್ಚಿಸಲು ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗಬೇಕು ಎಂದು ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಪ್ರಧಾನಿ ಮೋದಿ, ಜಲಸಂಪನ್ಮೂಲ ಸಚಿವರನ್ನ ಭೇಟಿ ಮಾಡಬೇಕೆಂದು ಚರ್ಚೆಯಾಗಿದೆ. ವಸ್ತು ಸ್ಥಿತಿ ಏನಿದೆ ಎಂದು ಅವರಿಗೂ ಅರ್ಥ ಮಾಡಿಸಬೇಕು ಎಂದುಕೊಂಡಿದ್ದೇವೆ’ ಎಂದರು.
ಇದನ್ನೂ ಓದಿ; ಸರ್ವಪಕ್ಷ ಸಭೆ ಮುಕ್ತಾಯ: ತಮಿಳುನಾಡಿಗೆ ನೀರು ಬಿಟ್ಟಿದ್ದಕ್ಕೆ ವಿಪಕ್ಷಗಳ ಆಕ್ಷೇಪ
‘ಮಹದಾಯಿ ವಿಚಾರದಲ್ಲಿ ‘ಎನ್ವರ್ನಮೆಂಟ್ ಕ್ಲಿಯರೆನ್ಸ್’ ಸಿಗ್ತಿಲ್ಲ. ಆ ಬಗ್ಗೆ ಕೂಡ ಚರ್ಚೆ ನಡೆಸಿದ್ದೇವೆ. ಮಹದಾಯಿ ವಿಚಾರವನ್ನು ಪ್ರಧಾನಿಗಳ ಗಮನಕ್ಕೆ ತರೋದಕ್ಕೆ ಸರ್ವ ಪಕ್ಷ ಸಭೆಯನ್ನು ದೆಹಲಿಗೆ ತೆಗೆದುಕೊಂಡು ಹೋಗುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ’ ಎಂದು ಮಾಹಿತಿ ನೀಡಿದರು.
‘ಪ್ರಧಾನಿ ಭೇಟಿ ಮಾಡಲು ಸರ್ವ ಪಕ್ಷ ನಿಯೋಗಕ್ಕೆ ಎಲ್ಲರೂ ಸಹಕಾರ ನೀಡ್ತೇವೆ ಎಂದು ಹೇಳಿದ್ದಾರೆ. ಮಹದಾಯಿ ವಿಚಾರದಲ್ಲಿ ನೋಟಿಫಿಕೇಷನ್ ಆಗಿಬಿಟ್ಟಿದೆ; ಗೋವಾ ರಾಜ್ಯ ಕಾಲು ಕೆರೆದುಕೊಂಡು ಜಗಳ ಮಾಡ್ತಿದೆ. ರೈತರ ರಕ್ಷಣೆ ರಾಜ್ಯ ಸರ್ಕಾರದ ಹೊಣೆ; ರೈತರ ಹಿತರಕ್ಷಣೆ ಮಾಡಿಯೇ ಮಾಡ್ತೇವೆ’ ಎಂದರು.
ಸರ್ವ ಪಕ್ಷ ಸಭೆ ಬಳಿಕ ಮಹಾದಾಯಿ ಹೋರಾಟಗಾರರ ಮನವಿ ಸ್ವೀಕರಿಸಿದ ಸಿಎಂ, ‘ಡಿಪಿಆರ್ ಕ್ಲಿಯರೆನ್ಸ್ ಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡ್ತೀವಿ. ಆನಂತರ ಮಹದಾಯಿ ಯೋಜನೆ ಕಾಮಗಾರಿ ಪ್ರಾರಂಭಿಸುತ್ತೇವೆ’ ಎಂದು ಹೇಳಿದರ ಅವರು, ‘ಕೇಂದ್ರ ಸರ್ಕಾರದ ಬಳಿ ಮಾತನಾಡಲು ದೆಹಲಿಗೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗ್ತಿವಿ’ ಎಂದು ಮಹದಾಯಿ ಹೋರಾಟಗಾರಿಗೆ ಸಿದ್ದರಾಮಯ್ಯ ಭರವಸೆ ನೀಡಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.