ಬೆಂಗಳೂರು: ‘ನೀರು ಬಿಟ್ಟಮೇಲೆ ವಾದ ಮಾಡಿ ಪ್ರಯೋಜನವಿಲ್ಲ. ಇದೆಲ್ಲದರ ಬಗ್ಗೆ ಸರ್ಕಾರದಲ್ಲಿ ಕೆಲಸ ಮಾಡುವವರಿಗೆ ಅರಿವು ಇರಬೇಕು’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ತಿರುಗೇಟು ಕೊಟ್ಟರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೇಂದ್ರಕ್ಕೆ ಸಂಸದರ ನಿಯೋಗ ಕರೆದುಕೊಂಡು ಹೋಗುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಸರ್ಕಾರ ಮುಂದಾಳತ್ವ ತೆಗೆದುಕೊಳ್ಳಬೇಕು. ನಿಮ್ಮ ಸರ್ಕಾರ ಸುಪ್ರೀಂಕೋರ್ಟ್ ಮುಂದೆ ಅಫಿಡವಿಡ್ ಹಾಕಿದೆ; ಅದಕ್ಕೆ ನೀವು ಬದ್ಧರಾಗಬೇಕಲ್ಲವೇ? ಈಗ ಅಫಿಡವಿಟ್ ನಂತರವೂ ನೀರು ಬಿಡೋಕೆ ಹೋದ್ರೆ ಸುಳ್ಳು ಹೇಳಿದ ಹಾಗೆ ಆಗುತ್ತೆ. ಸರ್ಕಾರದ ಪ್ರತಿಯೊಂದು ನಡೆ ರೈತರು ಹಾಗೂ ಜನಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ’ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ; ಬೊಮ್ಮಾಯಿ ತಮ್ಮ ಪ್ರಭಾವ ಬಳಸಿ ರಾಜ್ಯದ ಹಿತ ಕಾಪಾಡಲಿ: ಡಿ.ಕೆ. ಶಿವಕುಮಾರ್
‘ನಾವು ಅಧಿಕಾರದಲ್ಲಿ ಇದ್ದಾಗಲೂ ಕಾವೇರಿ ಕುರಿತು ಇಂತಹ ತೀರ್ಪು ಬಂದಿದೆ. ಆದರೆ, ಮರುಪರಿಶೀಲನಾ ಅರ್ಜಿ ಹಾಕಿದ್ದೆವು. ನೀರು ಬಿಟ್ಟಮೇಲೆ ವಾದ ಮಾಡಿ ಪ್ರಯೋಜನವಿಲ್ಲ. ಇದೆಲ್ಲದರ ಬಗ್ಗೆ ಸರ್ಕಾರ ನಡೆಸುವವರಿಗೆ ಅರಿವು ಇರಬೇಕು. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಪ್ರಧಾನಿ ಬಳಿ ಹೋಗೋಣ ಅಂತ ಹೇಳ್ತಿದ್ದಾರೆ. ತಮಿಳುನಾಡು ಸರ್ಕಾರದ ಪ್ರತಿನಿಧಿಗಳು ಕೆಂದ್ರದ ನೀರಾವರಿ ಸಚಿವರನ್ನು ಬೇಟಿ ಮಾಡಿದ್ರು. ಯಾವಾಗಲೂ ತಮಿಳುನಾಡು ಸರ್ಕಾರ ಸಹಕಾರ ನೀಡಿಲ್ಲ, ನೀಡೋದು ಇಲ್ಲ; ಅದು ಎಲ್ಲರಿಗೂ ಗೊತ್ತಿದೆ. ಮಾತುಕತೆ ವ್ಯರ್ಥ ಆಗಬಾರದು’ ಎಂದರು.
‘ತಮಿಳುನಾಡು ಸರ್ಕಾರ ವಸ್ತುಸ್ಥಿತಿ ಬಗ್ಗೆ ಯಾವಾಗಲೂ ಮಾತನಾಡಲ್ಲ. ತಮಿಳುನಾಡು ಅಣೆಕಟ್ಟಿನ ಪರಿಸ್ಥಿತಿ ಬಗ್ಗೆ ಎಲ್ಲಿಯವರೆಗೂ ಸರ್ಕಾರ ಮಾತನಾಡಲ್ಲ ಅಲ್ಲಿವರೆಗೂ ಸಮಸ್ಯೆ ಬಗೆಹರಿಯಲ್ಲ’ ಎಂದು ಹೇಳಿದರು.
ಇದನ್ನೂ ಓದಿ; ತಮಿಳುನಾಡು ಬೆಳೆ ಬೆಳೆಯಲು ನೀರು ಕೇಳ್ತಿದೆ, ನಾವು ಕುಡಿಯಲು ಕೇಳ್ತಿದ್ದೇವೆ : ದರ್ಶನ್ ಪುಟ್ಟಣ್ಣಯ್ಯ
‘ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದರಿಂದ ನನಗೆ ಲಾಭವೇನೂ ಇಲ್ಲ. ರಾಜ್ಯದ ಹಿತದೃಷ್ಟಿಯಿಂದ ಸಲಹೆ ಕೊಟ್ಟಿದ್ದೇನೆ. ನಮ್ಮ ಕಾಲದಲ್ಲಿ ಯಾವುದೇ ಇಕ್ಕಟ್ಟು, ಬಿಕ್ಕಟ್ಟು ಇರಲಿಲ್ಲ. ನಮ್ಮ ಸಲಹೆಯನ್ನು ತೆಗೆದುಕೊಳ್ಳದೇ ಇದ್ದರೆ ಏನು ಮಾಡಲು ಆಗುತ್ತದೆ’ ಎಂದು ಪ್ರಶ್ನಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.