ರಾಮನಗರ: ಕುಂಬಳಗೂಡು ಪೊಲೀಸ್ ಠಾಣೆ ಉದ್ಘಾಟನೆಗೆ ಮೊದಲೇ ಪ್ಲ್ಯಾನ್ ಆಗಿತ್ತು. ಹೀಗಾಗಿ ವಿಜಯೇಂದ್ರ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗಲಿಲ್ಲ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಸ್ಪಷ್ಟನೆ ನೀಡಿದ್ದಾರೆ.
ವಿಜಯೇಂದ್ರ ಪದಗ್ರಹಣ ಕಾರ್ಯಕ್ರಮಕ್ಕೆ ಗೈರು ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸ್.ಟಿ.ಸೋಮಶೇಖರ್, ಮೊದಲು ನ.16 ರಂದು ಪೊಲೀಸ್ ಠಾಣೆ ಉದ್ಘಾಟನೆ ಎಂದಿದ್ದರು. ಬಳಿಕ ನ.15 ಕ್ಕೆ ಕಾರ್ಯಕ್ರಮ ಎಂದು ಗೃಹಸಚಿವರು ತಿಳಿಸಿದ್ರು. ಹೀಗಾಗಿ ವಿಜಯೇಂದ್ರ ಕಾರ್ಯಕ್ರಮಕ್ಕೆ ಹೋಗಿಲ್ಲ. ನಮ್ಮ ಕ್ಷೇತ್ರಕ್ಕೆ ಇಂದು ಗೃಹ ಸಚಿವರು ಬರುತ್ತಿದ್ದಾರೆ, ಹೀಗಾಗಿ ಇಲ್ಲಿದ್ದೇನೆ. ಸಚಿವರ ಕಾರ್ಯಕ್ರಮ ಮುಗಿದ ಬಳಿಕ ನಾನು ಪಕ್ಷದ ಕಾರ್ಯಕ್ರಮಕ್ಕೆ ಹೋಗುತ್ತೇನೆ. ನಾನು ಬಿಜೆಪಿಯಿಂದ ದೂರ ಉಳಿಯುತ್ತಿಲ್ಲ. ನನ್ನ ಕ್ಷೇತ್ರದ ಕೆಲಸ ಮಾಡುತ್ತೀದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ‘ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು’ ಸೇವೆ ಬೆಳಗಾವಿಯವರೆಗೆ ವಿಸ್ತರಣೆ, ರೈಲ್ವೆ ಸಚಿವಾಲಯ ಆದೇಶ
ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಆಯ್ಕೆ ಸರಿಯಾಗಿದೆ. ಇಂದಿನ ಪರಿಸ್ಥಿತಿಗೆ ಅವರ ಆಯ್ಕೆ ನೂರಕ್ಕೆ ನೂರರಷ್ಟು ಸರಿ ಇದೆ. ಈ ಹಿಂದೆ ವಿಜಯೇಂದ್ರ ರಾಜ್ಯ ಉಪಾಧ್ಯಕ್ಷರಾಗಿದ್ದರು. ಅವರಿಗೆ ಅನುಭವ ಇದೆ.ಎಲ್ಲ ಜಿಲ್ಲೆಯ ನಾಯಕರ ಅವರಿಗೆ ಪರಿಚಯ ಇದೆ.ಹೀಗಾಗಿ ಮುಂದಿನ ಚುನಾವಣೆಗೆ ಒಳ್ಳೆಯ ಬೆಳವಣಿಗೆ ಎಂದರು.
ವಿಜಯೇಂದ್ರ ಆಯ್ಕೆ ಕುಟುಂಬ ರಾಜಕಾರಣ ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಕುಟುಂಬ ರಾಜಕೀಯ ಅಲ್ಲ. ಯಡಿಯೂರಪ್ಪ ಚುನಾವಣೆಗೆ ನಿಲ್ಲಲ್ಲ ಎಂದ ಮೇಲೆ ಅವರ ಮಗನಿಗೆ ಅಧಿಕಾರ ನೀಡಿದ್ದಾರೆ. ಬಿ.ವೈ.ರಾಘವೇಂದ್ರ ಹಿಂದೆ ಲೋಕಸಭಾ ಸದಸ್ಯರಾಗಿದ್ದರು. ಈಗ ವಿಜಯೇಂದ್ರ ಎಂಎಲ್ ಎ ಆಗಿದ್ದಾರೆ ಅಷ್ಟೇ ಎಂದು ತಿಳಿಸಿದರು.
ಬಿಜೆಪಿಯಲ್ಲಿ ಎಸ್.ಟಿ.ಸೋಮಶೇಖರ್ ಕಡೆಗಣನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನ್ನನ್ನು ಯಾರು ಬೇಕಿದ್ದರೂ ಕಡೆಗಣಿಸಲಿ ಬಿಡಲಿ. ಕ್ಷೇತ್ರದ ಜನ ನನ್ನನ್ನು ಕಡೆಗಣಿಸಿಲ್ಲ. ಗ್ಯಾರಂಟಿ ಯೋಜನೆಗಳ ಬಗ್ಗೆ 40 ಮಂದಿ ಮಹಿಳೆಯರ ಮೂಲಕ ಗ್ಯಾರಂಟಿ ತಲುಪುತ್ತಿರುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇನೆ. ಇದು ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ.ಸರ್ಕಾರಿ ಯೋಜನೆಗಳು ಜನರಿಗೆ ತಲುಪಬೇಕು ಎಂಬ ದೃಷ್ಟಿಯಷ್ಟೆ ನನ್ನದು ಎಂದು ಹೇಳಿದರು.
ಹಿಂದೆ ಮೈಸೂರು ಉಸ್ತುವಾರಿ ಸಚಿವನಾಗಿದ್ದ ವೇಳೆ ಕೇವಲ ಮೂರು ಕ್ಷೇತ್ರದಲ್ಲಷ್ಟೆ ಬಿಜೆಪಿ ಇತ್ತು. ಹೀಗಿದ್ದರೂ, ಉಳಿದ ಕ್ಷೇತ್ರಗಳಲ್ಲಿಯೂ ಕೆಲಸ ಮಾಡುತ್ತಿದ್ದೆ. ಅದೇ ರೀತಿ ಈಗಲೂ ನಡೆಯುತ್ತಿದೆ. ಬಿಜೆಪಿಯಲ್ಲಿ ನಾನು ಗೆದ್ದಿದ್ದೇನೆ. ಹಾಗಂತ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮ ಮಾಡಬಾರದಾ.?
ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಎಸ್.ಎಂ.ಕೃಷ್ಣ ಅವರು ಬಿಜೆಪಿ ಸೇರಿದ್ದರು. ಅವರಿಗೆ ನೀಡಿದ್ದ ಅಶ್ವಾಸನೆಗಳನ್ನು ಬಿಜೆಪಿ ಈಡೇರಿಸಿಲ್ಲ. ಹಿಂದೆ ಸಚಿವರಾಗಿದ್ದ ಶಂಕರ್, ಬಿ.ಸಿ.ನಾಗೇಶ್ ಸೇರಿದಂತೆ ಅನೇಕರಿಗೆ ಯಾವ ಸೌಲಭ್ಯ ನೀಡಿಲ್ಲ. ಮೊದಲು ಜಾಮೂನು ನೀಡಿ ಬಳಿಕ ವಿಷ ನೀಡುತ್ತಾರೆ ಎಂಬ ಹೇಳಿಕೆ ನನ್ನೊಂದಿಗೆ ಬಿಜೆಪಿ ಸೇರಿದ್ದ 17 ಮಂದಿಗೆ ಸೇರಿಸಿ ಹೇಳಿದ್ದು. ಈ ಹೇಳಿಕೆ ವೈಯಕ್ತಿಕವಾಗಿರಲಿಲ್ಲ. ನನಗೆ ಮಂತ್ರಿ ಸ್ಥಾನ ನೀಡಿದ್ರು, ಆದರೆ ಏಳೆಂಟು ಜನರಿಗೆ ಸ್ಥಾನಮಾನ ಸಿಗಲಿಲ್ಲ ಎಂದು ಕಿಡಿಕಾರಿದರು.
ಎಂಎಲ್ ಸಿ ಎಚ್.ವಿಶ್ವನಾಥ್ ಅವರು ತಮ್ಮ ಪುಸ್ತಕದಲ್ಲಿ ಸಮ್ಮಿಶ್ರ ಸರ್ಕಾರ ಉರುಳುವಾಗ ಕೆಲ ಶಾಸಕರು ಹಣ ಮಾಡಿರುವುದಾಗಿ ಬಗ್ಗೆ ಉಲ್ಲೇಖ ಮಾಡುವುದಾಗಿ ಹೇಳಿರೋ ವಿಚಾರವಾಗಿ ಮಾತನಾಡಿದ ಅವರು, ಬುಕ್ ನಲ್ಲಿ ಯಾಕೆ? ಧರ್ಮಸ್ಥಳ, ಚಾಮುಂಡಿ ಬೆಟ್ಟದಲ್ಲಿ ಕುಳಿತುಕೊಳ್ಳಲಿ. ಅಲ್ಲೇ ಬುಕ್ ಬರೆದು, ಓದಲಿ. ಚಾಮುಂಡಿ ಬೆಟ್ಟಕ್ಕೆ ಹೆಚ್ಚಾಗಿ ಹೋಗುತ್ತಾರಲ್ಲ. ಅಲ್ಲೆ ಕುಳಿತು ಬುಕ್ ಓದಲಿ. ಅವರಿಗೂ ಬಿಜೆಪಿಯಲ್ಲಿ ಮಂತ್ರಿ ಸ್ಥಾನ ಸಿಗಲಿಲ್ಲ ಅಲ್ಲವೇ ಎಂದು ವಾಗ್ದಾಳಿ ನಡೆಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.