ಬೆಳಗಾವಿ: ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷ ಶೇ.13ರಷ್ಟು ವೋಟ್ ಪಡೆದಿದೆ. ಆಮ್ ಪಡೆದಿರುವ 13% ಮತಗಳು ಕಾಂಗ್ರೆಸ್ನದ್ದು. ಇದರಿಂದಾಗಿ ಪಕ್ಷಕ್ಕೆ ನೇರವಾಗಿ ನಮಗೆ ಹೊಡೆತ ಬಿದ್ದಿದೆ. ಗುಜರಾತ್‌ನಲ್ಲಿ ಕಾಂಗ್ರೆಸ್ ಪಕ್ಷ 60-70 ಕ್ಷೇತ್ರಗಳಲ್ಲಿ ಗೆಲ್ಲಬೇಕಿತ್ತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರಕ್ಕೇರಿದ್ದು, ಗುಜರಾತ್‌ನಲ್ಲಿ ಕಾಂಗ್ರೆಸ್ಗೆ ಹೀನಾಯ ಸೋಲುಂಟಾಗಿದೆ. ಈ ಕುರಿತಾಗಿ ಬೆಳಗಾವಿಯಲ್ಲಿ ಮಾತನಾಡಿ, ಇದೇನೂ ಮೋದಿ ಮ್ಯಾಜಿಕ್ ಅಲ್ಲ, ಅಭಿವೃದ್ಧಿ ಮ್ಯಾಜಿಕ್ ಕೂಡ ಅಲ್ಲ ಎಂದರು.ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಹೊಸಬರಿಗೆ ಟಿಕೆಟ್ ನೀಡಿದೆ.
ಹಿಂದಿನ 3 ಚುನಾವಣೆಗಳಲ್ಲಿ 30-40 ಹೊಸಬರಿಗೆ ಟಿಕೆಟ್ ಹಂಚಿಕೆ ಮಾಡಲಾಗಿದೆ. ಆದರೆ ನಮ್ಮಲ್ಲಿ ಸೋಲುತ್ತಾರೆ ಎಂದು ಗೊತ್ತಿದ್ರೂ ಟಿಕೆಟ್ ನೀಡುತ್ತಾರೆ. ಸೀನಿಯರ್ ಅಂತಾ ಟಿಕೆಟ್ ನೀಡುತ್ತೇವೆ. ಗೆಲ್ಲುವ ಹಾಗೆ ಇದ್ದರೆ ಮಾತ್ರ ಹಿರಿಯರಿಗೆ ಟಿಕೆಟ್ ನೀಡಲಿ. ಜಾತಿ ಯುಗ ಮುಗಿದಿದೆ, ಕೆಲಸ ಮಾಡುವುದನ್ನು ಜನ ನೋಡ್ತಾರೆ. ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಆಮ್ ಆದ್ಮಿ ಪಕ್ಷದಿಂದ ಬಹಳಷ್ಟು ಸೀಟ್ ನಾವು ಕಳೆದುಕೊಂಡಿದ್ದೇವೆ. ಮತ ವಿಭಜನೆ ಆಗಿರುವುದರಿಂದ ಬಿಜೆಪಿ ಗೆದ್ದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ತವರು ರಾಜ್ಯದಲ್ಲಿ ನಾವು ಗೆದ್ದಿದ್ದೇವೆ. ಹಿಮಾಚಲ ಪ್ರದೇಶದಲ್ಲಿ ಖರ್ಗೆ, ಪ್ರಿಯಾಂಕಾ ಪ್ರಚಾರ ಮಾಡಿದ್ದರು ಎಂದರು.