ಬೆಂಗಳೂರು: ಹೆಚ್.ಡಿ. ದೇವೇಗೌಡರು ಹಾಗೂ ಹೆಚ್.ಡಿ. ಕುಮಾರಸ್ವಾಮಿ ಬಾಯಿಂದಲೇ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಅಧಿಕೃತ ಹೇಳಿಕೆ ಹೊರಬಿದ್ದಿದ್ದು, ರಾಜ್ಯ ಕಾಂಗ್ರೆಸ್ ದಳಪತಿಗಳ ಕಾಲೆಳೆದಿದೆ. ‘ಚುನಾವಣೆಯಲ್ಲಿ ಸೋತರೆ ಪಕ್ಷ ವಿಸರ್ಜಿಸುತ್ತೇನೆ ಎಂದಿದ್ದರು. ಆದರೆ ಈಗ ‘ಜಾತ್ಯತೀತತೆ’ಯನ್ನು ವಿಸರ್ಜಿಸಲು ಹೊರಟಿದ್ದಾರೆ’ ಎಂದು ಲೇವಡಿ ಮಾಡಿದೆ.
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್, ‘ಚುನಾವಣೆಯಲ್ಲಿ ಸೋತರೆ ಪಕ್ಷ ವಿಸರ್ಜಿಸುತ್ತೇನೆ ಎಂದಿದ್ದರು, ಆದರೆ ಈಗ ‘ಜಾತ್ಯತೀತತೆ’ಯನ್ನು ವಿಸರ್ಜಿಸಲು ಹೊರಟಿದ್ದಾರೆ. ಜನತಾ ದಳ ಎಂಬ ಹೆಸರನ್ನು ‘ಕಮಲ ದಳ’ ಎಂದು ಬದಲಿಸಿಕೊಂಡರೆ ಒಳಿತು! ಇತ್ತ ಬಿಜೆಪಿ, ಜೆಡಿಎಸ್ ಪಕ್ಷವನ್ನು ಫ್ಯಾಮಿಲಿ ಪಾರ್ಟಿ ಎಂದು ಟೀಕಿಸುತ್ತಿತ್ತು, ಈಗ ಅದೇ ಫ್ಯಾಮಿಲಿಗೆ ನಾಲ್ಕು ಸೀಟು ಬಿಟ್ಟು ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡು ಅಲ್ಲವೇ’ ಎಂದು ಪ್ರಶ್ನಿಸಿದೆ.
‘ಬಿಜೆಪಿ-ಜೆಡಿಎಸ್ ಮೈತ್ರಿ ಹೇಗಿದೆ ಅಂದರೆ, ನಡು ನೀರಲ್ಲಿ ಮುಳುಗುತ್ತಿರುವ ಇಬ್ಬರು ಒಬ್ಬರನೊಬ್ಬರು ಕೈ ಹಿಡಿದು ಆಸರೆ ಪಡೆಯುವಂತೆ..! ಪರಸ್ಪರ ಕೈ ಹಿಡಿದು ಇಬ್ಬರೂ ಮುಳುಗಿ ತಳ ಸೇರುವುದು ಖಂಡಿತ. ಮುಳುಗುವವರು ಹುಲ್ಲು ಕಡ್ಡಿಯ ಆಸರೆಯನ್ನಾದರೂ ಪಡೆಯಬೇಕು, ಅದು ಬಿಟ್ಟು ಮತ್ತೊಬ್ಬ ಮುಳುಗುತ್ತಿರುವವರ ಆಸರೆ ಪಡೆದರೆ ಬದುಕಲು ಸಾಧ್ಯವೇ’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಇದನ್ನೂ ಓದಿ; ಗ್ಯಾರಂಟಿಗಳ ‘ಅಡ್ಡ ಪರಿಣಾಮ’ದ ತೀವ್ರತೆ ಜನರಿಗೆ ತಟ್ಟುತ್ತಿದೆ: ಕುಮಾರಸ್ವಾಮಿ
ಕಾಂಗ್ರೆಸ್ ಗ್ಯಾರಂಟಿಗಳ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ:
ಒಂದು ಕಡೆ ಜೆಡಿಎಸ್-ಬಿಜೆಪಿ ಮೈತ್ರಿ ಕುರಿತು ಕಾಂಗ್ರೆಸ್ ಲೇವಡಿ ಮಾಡುತ್ತಿದ್ದರೆ, ಮತ್ತೊಂದು ಕಡೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ‘ಅಡ್ಡ ಪರಿಣಾಮ’ಗಳನ್ನು ಇಟ್ಟುಕೊಂಡು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ‘ಅಡ್ಡ ಪರಿಣಾಮ’ದ ತೀವ್ರತೆ ಜನರಿಗೆ ತಟ್ಟುತ್ತಿದೆ. ಸರ್ಕಾರಿ ಸೌಲಭ್ಯಗಳ ಹಂಚಿಕೆಯಲ್ಲಿನ ಅಸಮಾನತೆ, ಪಕ್ಷಪಾತವು ಅರಾಜಕತೆ ಸೃಷ್ಟಿಸಿದೆ. ಅವೈಜ್ಞಾನಿಕ, ಅರೆಬೆಂದ ‘ಶಕ್ತಿ’ ಯೋಜನೆಯ ಫಲವಾಗಿ ಇವತ್ತು ಖಾಸಗಿ ಸಂಚಾರ ವ್ಯವಸ್ಥೆ ಬುಡಮೇಲಾಗಿದೆ’ ಎಂದು ಹೇಳಿದ್ದಾರೆ.