ನೆಲಮಂಗಲ: ‘ಪೇ-ಸಿಎಂ’ ಪೋಸ್ಟರ್ ಅಂಟಿಸಿದ್ದ ಮೂವರು ವಿದ್ಯಾರ್ಥಿಗಳನ್ನು ನೆಲಮಂಗಲ ಟೌನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ಮೂವರು ವಿದ್ಯಾರ್ಥಿಗಳನ್ನು ಬಂಧಿಸಿ ರಾತ್ರಿ ವಾಪಸ್ ಕಳಿಸಲಾಗಿತ್ತು. ಆ ಬೆನ್ನಲ್ಲೇ ಇಂದು ಬೆಳಗ್ಗೆ ಮತ್ತೆ ಮೂವರನ್ನು ಬಂಧಿಸಲಾಗಿದೆ.
ಬಿಜೆಪಿ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್ ಪೇ ಸಿಎಂ ಪೋಸ್ಟರ್ ಅನ್ನೇ ಅಸ್ತ್ರವನ್ನಾಗಿ ಉಪಯೋಗಿಸಿಕೊಳ್ಳುತ್ತಿದೆ. ನಿನ್ನೆಯಷ್ಟೇ ಪೇಸಿಎಂ ಪೋಸ್ಟರ್ ಅಂಟಿಸಿ ಅಬಿಯಾನಕ್ಕೆ ಚಾಲನೆ ನೀಡಿದ್ದರು. ಈಗ ಈ ಅಭಿಯಾನ ರಾಜ್ಯದಾದ್ಯಂತ ವ್ಯಾಪಿಸುತ್ತಿದೆ. ಇನ್ನು ಪೇ ಸಿಎಂ ಪೋಸ್ಟರ್ ವಿಚಾರವಾಗಿ ಗರಂ ಆಗಿರುವ ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಯಾವುದಾದರೂ ವಿಚಾರವಿದ್ದರೆ, ನೇರವಾಗಿ ಮಾತಾಡಬೇಕು, ದಾಖಲೆ ನೀಡಬೇಕು ಹಾಗೂ ತನಿಖೆಯಾಗಬೇಕು. ಯಾವುದೇ ವಿಚಾರವಿಲ್ಲದೆ, ಪೂರ್ಣಪ್ರಮಾಣದ ತಯಾರಿ ಇಲ್ಲದೆ ಸದನಕ್ಕೆ ಬರುತ್ತಾರೆ. ಇದು ಅವರ ನೈತಿಕತೆಯ ಅಧ:ಪತನ ತೋರುತ್ತದೆ. ನೈತಿಕತೆ ಇಲ್ಲದೆ ಹೆಸರು ಕೆಡಿಸುವ ಕಾರ್ಯಕ್ರಮವಿದು ಎಂದು ಸಿಎಂ ಬೊಮ್ಮಾಯಿ ಆಕ್ರೋಶಿಸಿದ್ದರು. ಜನಪರ ಕಾಳಜಿ ಇಲ್ಲದೆ ಡರ್ಟಿ ಪಾಲಿಟಿಕ್ಸ್ ಮಾಡಿಕೊಂಡು ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ. ಇದೆಲ್ಲಾ ಕರ್ನಾಟಕದಲ್ಲಿ ಸಾಧ್ಯವಿಲ್ಲ. ಸರ್ಕಾರ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.
ಅಲ್ಲದೇ ಪ್ರಜಾಪ್ರಭುತ್ವದಲ್ಲಿರುವ ನಾವು ಸರ್ಕಾರದ ಭ್ರಷ್ಟಾಚಾರವನ್ನು ಜನರಿಗೆ ತಿಳಿಸುವ ಹಕ್ಕಿದೆ. ಒತ್ತಡಕ್ಕೆ ಮಣಿದು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಾಗಿದ್ದರೆ ಕೋರ್ಟ್ನಲ್ಲಿ ಜಾಮೀನು ಪಡೆದು ವಿದ್ಯಾರ್ಥಿಗಳನ್ನು ಬಿಡಿಸಿಕೊಂಡು ಬರುವುದಾಗಿ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ವಿದ್ಯಾರ್ಥಿಗಳನ್ನು ಬಂಧಿಸಿರುವುದಕ್ಕೆ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.