ಬೆಳಗಾವಿ : ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಸಿದ್ಧತೆ ನಡೆಸುತ್ತಿದ್ದು, ರಾಜ್ಯ ರಾಜಕಾರಣ ‘ಹಾಟ್ ಸ್ಪಾಟ್’ ಎನಿಸಿಕೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಟಿಕೆಟ್ ಲೆಕ್ಕಾಚಾರ ಶುರುವಾಗಿದೆ.
ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭೆ ಕ್ಷೇತ್ರಗಳಿಗೆ ಕಾಂಗ್ರೆಸ್ ನಿಂದ ಇಬ್ಬರು ಅಭ್ಯರ್ಥಿಗಳ ಹೆಸರು ಮುನ್ನೆಲೆಗೆ ಬಂದಿವೆ. ಮೂಲಗಳ ಪ್ರಕಾರ, ಚಿಕ್ಕೋಡಿ ಕ್ಷೇತ್ರದಿಂದ ಮಾಜಿ ಸಂಸದ, ಹಾಲಿ ವಿಧಾನಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಲೋಕಸಭೆ ಟಿಕೆಟ್ ನಿರೀಕ್ಷೆಯಲ್ಲಿದ್ದು, ಈಗಾಗಲೇ ದೆಹಲಿ ಮಟ್ಟದಲ್ಲಿ ಸಕ್ರಿಯವಾಗಿ ಓಡಾಟ ನಡೆಸುತ್ತಿದ್ದಾರೆ. ಟಿಕೆಟ್ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ಬದ್ದ ಎಂದು ಹೇಳಿದ್ದಾರೆ.
ಇತ್ತ ಬೆಳಗಾವಿಯಲ್ಲಿ ತಮ್ಮ ಪುತ್ರ ಮೃಣಾಲ್ ಅವರನ್ನು ಕಣಕ್ಕಿಳಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ಲಾನ್ ಮಾಡ್ತಿದ್ದಾರೆ. ತಾಯಿ ಲಕ್ಷ್ಮಿ ಹೆಬ್ಬಾಳರ್ ಸಚಿವರಾದ ಬಳಿಕ ಮೃಣಾಲ್ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದು, ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ತಕ್ಷಣಕ್ಕೆ ಏನು ಹೇಳಲ್ಲ. ಪಕ್ಷ ಕೊಡುವ ಜವಾಬ್ದಾರಿಯನ್ನ ನಿರ್ವಹಿಸುವೆ ಎಂದು ಮೃಣಾಲ್ ತಿಳಿಸಿದ್ದಾರೆ.
ಇದನ್ನೂ ಓದಿ : ಬಿಜೆಪಿ ₹10ಗೆ ಸಿಗೋ ವಸ್ತುವಿಗೆ ₹100 ಕೊಟ್ಟಿದೆ: ಸತೀಶ್ ಜಾರಕಿಹೊಳಿ
2013ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿಯಿಂದ ಪ್ರಕಾಶ್ ಹುಕ್ಕೇರಿ ಮತ್ತು ಬೆಳಗಾವಿಯಿಂದ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪರ್ಧಿಸಿದ್ದರು. ಪ್ರಕಾಶ್ ಹುಕ್ಕೇರಿ ಮೋದಿ ಅಲೆಯ ನಡುವೆ ಚಿಕ್ಕೋಡಿಯಲ್ಲಿ ಗೆಲುವು ದಾಖಲಿಸಿದ್ದರು. ಆದರೆ, ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸೋಲು ಅನುಭವಿಸಿದ್ದರು. ಈಗ ಅವಕಾಶ ಸಿಕ್ಕರೆ ಪುತ್ರನನ್ನು ಸಂಸತ್ ಗೆ ಕಳುಹಿಸಲು ಹೆಬ್ಬಾಳ್ಕರ್ ಸಿದ್ಧತೆ ಮಾಡಿಕೊಳ್ತಿದ್ದಾರೆ.
ಬಿಜೆಪಿಯಲ್ಲಿ ಸದ್ಯಕ್ಕೆ ಬಹಿರಂಗವಾಗಿ ಯಾವುದೇ ಟಿಕೆಟ್ ಫೈಟ್ ಇಲ್ಲದಿದ್ದರೂ, ಆಂತರಿಕವಾಗಿ ಬಿಜೆಪಿ ನಾಯಕರ ನಡುವೆ ಟಿಕೆಟ್ ಲೆಕ್ಕಾಚಾರ ನಡೆಯುತ್ತಿದೆ ಎಂದು ಹೇಳಲಾಗ್ತಿದೆ. ಬೆಳಗಾವಿಯಲ್ಲಿ ಈ ಬಾರಿ ಮಂಗಳಾ ಅಂಗಡಿ ಅವರಿಗೆ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಇದ್ದು, ಅವರ ಬದಲಿಗೆ ಬಿಜೆಪಿ ಯಾರನ್ನು ಕಣಕ್ಕಿಳಿಸಲಿದೆ ಎಂಬುವುದನ್ನು ಕಾದು ನೋಡಬೇಕಿದೆ. ಅತ್ತ ಚಿಕ್ಕೋಡಿಯಲ್ಲಿ ಮಾಜಿ ಸಚಿವ ದಿ.ಉಮೇಶ್ ಕತ್ತಿ ಅವರ ಸಹೋದರ ರಮೇಶ್ ಕತ್ತಿ ಮತ್ತು ಸಂಸದ ಅಣ್ಣ ಸಾಹೇಬ್ ಜೊಲ್ಲೆ ನಡುವೆ ಒಳಗೊಳಗೆ ಟಿಕೆಟ್ ಫೈಟ್ ಇದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.