ಬೆಂಗಳೂರು : ಹಲವು ಬೇಡಿಕೆಗಳನ್ನು ಮುಂದಿಟ್ಟು ಸೆ.11ರಂದು ನಗರದಲ್ಲಿ ಆಟೋ, ಟ್ಯಾಕ್ಸಿ ಸೇರಿದಂತೆ ವಿವಿಧ ವಾಹನಗಳ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ನಿರ್ಧರಿಸಿದೆ. ಈ ಹಿನ್ನೆಲೆ ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸುದ್ದಿಗೋಷ್ಠಿ ಕರೆದಿದ್ದಾರೆ.
ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಮುಂದಿಟ್ಟಿರುವ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ, ನಮ್ಮ ಬೇಡಿಕೆ ಈಡೇರಿಸದಿದ್ದರೆ ಬಂದ್ ಖಚಿತ ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದೆ. ಆಟೋ, ಕ್ಯಾಬ್, ಶಾಲಾ ಬಸ್, ಖಾಸಗಿ ಬಸ್, ಮ್ಯಾಕ್ಸಿ ಕ್ಯಾಬ್, ಐಟಿ-ಬಿಟಿ ಕಂಪನಿಗಳಿಗೆ ಓಡಾಡುತ್ತಿರುವ ಕ್ಯಾಬ್, ಏರ್ ಪೋರ್ಟ್ ಕ್ಯಾಬ್ ಗಳ ಸೇವೆ ಸ್ಥಗಿತಗೊಳಿಸುವುದಾಗಿ ಹೇಳಿದೆ.
ಇದನ್ನೂ ಓದಿ : ಸೆ.11ರಂದು ಆಟೋ, ಟ್ಯಾಕ್ಸಿ ಸೇವೆ ಬಂದ್ : ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಚಾಲಕರು
ಈ ಹಿನ್ನೆಲೆ ಇಂದು ಮಧ್ಯಾಹ್ನ 12 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿರುವ ಸಾರಿಗೆ ಸಚಿವರು, ಸರ್ಕಾರದ ನಿಲುವು ಪ್ರಕಟಿಸಲಿದ್ದಾರೆ. ಯಾವೆಲ್ಲ ಬೇಡಿಕೆಗಳು ಈಡೇರಿಸಲು ಸಾಧ್ಯ ಎಂದು ಮಾಹಿತಿ ನೀಡಲಿದ್ದಾರೆ.
ಈಗಾಗಲೇ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಜೊತೆ ಸಾರಿಗೆ ಸಚಿವರು ಮೂರು ಬಾರಿ ಸಭೆ ನಡೆಸಿದ್ದಾರೆ. ಸಿಎಂ ನೇತೃತ್ವದಲ್ಲಿ ಸಭೆ ನಡೆಸಿದರೂ ಯಾವುದೇ ಫಲ ಪ್ರದವಾಗಿಲ್ಲ. ಹಾಗಾಗಿ, ಖಾಸಗಿ ವಾಹನಗಳ ಸೇವೆ ಸ್ಥಗಿತಗೊಳಿಸಿ ‘ಬೆಂಗಳೂರು ಬಂದ್’ ಮಾಡುತ್ತೇವೆ ಎಂದು ಒಕ್ಕೂಟ ಘೋಷಣೆ ಮಾಡಿದೆ. ಈ ನಡುವೆ ಸಾರಿಗೆ ಸಚಿವರು ಸುದ್ದಿಗೋಷ್ಠಿ ಕರೆದಿದ್ದು, ಒಕ್ಕೂಟದ ಬೇಡಿಕೆಯನ್ನು ಸರ್ಕಾರ ಈಡೇರಿಸುತ್ತಾ, ಇಲ್ಲ ಒಕ್ಕೂಟ ಬೆಂಗಳೂರು ಬಂದ್ ಮಾಡುತ್ತಾ ಎಂಬುವುದು ಇಂದು ಗೊತ್ತಾಗಲಿದೆ.
ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಬೇಡಿಕೆಗಳೇನು?
- ಚಾಲಕರಿಗೆ ಮಾಸಿಕ ಒಂದು ಸಾವಿರ ರೂಪಾಯಿ ಪರಿಹಾರ ನೀಡಬೇಕು
- ಅಸಂಘಟಿತ ವಾಣಿಜ್ಯ ವಾಹನ ಚಾಲಕರ ಮತ್ತು ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು
- ಚಾಲಕರ ಪುನಶ್ಚೇತನಕ್ಕೆ ಕಡಿಮೆ ಬಡ್ಡಿಯಲ್ಲಿ ರೂ. 2 ಲಕ್ಷದವರೆ ಸಾಲ ನೀಡಬೇಕು
- ಎಲೆಕ್ಟ್ರಿಕ್ ಆಟೋಗಳಿಗೆ ಪರ್ಮಿಟ್ ನೀಡಬೇಕು
- ರ್ಯಾಪಿಡೋ, ಓಲಾ, ಊಬರ್ ಸೇವೆ ಸ್ಥಗಿತಗೊಳಿಸಬೇಕು
- ವಿಮಾನ ನಿಲ್ದಾಣಕ್ಕೆ ಏಕರೂಪ ದರ ನಿಗದಿ ಮಾಡಬೇಕು
- ರೂ. 10 ರಿಂದ 15 ಲಕ್ಷದ ಬೆಲೆಯ ವಾಹನಗಳಿಗೆ ಇರುವ ಶೇಕಡಾ 9ರಷ್ಟು ಜೀವಿತಾವಧಿ ತೆರಿಗೆ 20 ಲಕ್ಷದ ವಾಹನಗಳಿಗೂ ಮುಂದುವರೆಸಬೇಕು
- ಚಾಲಕರಿಗೆ ವಸತಿ ಯೋಜನೆ, ಕಾರು ಖರೀದಿಗೆ ಸಬ್ಸಿಡಿ ನೀಡಬೇಕು
- ವೈಟ್ ಬೋರ್ಡ್ ನಲ್ಲಿ ಬಾಡಿಗೆ ಮಾಡುವ ವಾಹನ ಚಾಲಕ, ಮಾಲಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು
- ಚಾಲಕರ ಮಕ್ಕಳಿಗೆ ಶಾಲಾ ವಿದ್ಯಾರ್ಥಿ ವೇತನ ನೀಡಬೇಕು
- ಶಕ್ತಿ ಯೋಜನೆಯನ್ನು ಖಾಸಗಿ ಬಸ್ ಗಳಿಗೂ ವಿಸ್ತರಣೆ ಮಾಡಬೇಕು
- ಸರ್ಕಾರಿ ಬಸ್ ಗಳಲ್ಲಿ ನಿರ್ದಿಷ್ಟ ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಲು ನಿಯಮ ವಿಧಿಸಬೇಕು
- ಖಾಸಗಿ ಬಸ್ ಗಳನ್ನು ಕಿಲೋ ಮೀಟರ್ ಆಧಾರದ ಮೇಲೆ ಸರ್ಕಾರ ಬಾಡಿಗೆಗೆ ಪಡೆಯಬೇಕು
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.