ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಒಕ್ಕೂಟ ಈಗ ನೆನಪಾಗಿದೆ. ಖಾಸಗಿ ಒಕ್ಕೂಟದ ಹೋರಾಟಕ್ಕೆ ನೈತಿಕ ಬೆಂಬಲ ಕೊಡುವುದಾಗಿ ಹೇಳುತ್ತಾರೆ. ಹಿಂದೆ ಅವರದೇ ಸರ್ಕಾರ ಇದ್ದಾಗ ಯಾಕೆ ಒಕ್ಕೂಟದ ಬೇಡಿಕೆ ಈಡೇರಿಸಿಲ್ಲ. ಬಿಜೆಪಿಯವರಿಗೆ ನೈತಿಕತೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕಿಡಿ ಕಾರಿದ್ದಾರೆ.
ನಗರದಲ್ಲಿಂದು ಪೊಲಿಟಿಕಲ್360 ಜೊತೆಗೆ ಮಾತನಾಡಿದ ಅವರು, ಇಂದು ನಗರ ಬಂದ್‌ಗೆ ಕರೆ ನೀಡಿರುವವರ ಜತೆ ಮೂರ್ನಾಲ್ಕು ಬಾರಿ ಸಭೆ ನಡೆಸಿದ್ದೇನೆ. ಮೊನ್ನೆ ಮುಖ್ಯಮಂತ್ರಿಗಳು ಕರೆದ ಸಭೆಗೂ ಅವರು ಗೈರಾಗಿದ್ದರು. ಅವರೆಲ್ಲ ಸಭೆಗೆ ಬರದೇ, ಈಗ ಮುಷ್ಕರ ಮಾಡುತ್ತಿದ್ದಾರೆ. ಅವರ ಬೇಡಿಕೆಗಳನ್ನು ನನ್ನ ಮಟ್ಟದಲ್ಲಿ ಈಡೇರಿಸಲು ಆಗುವುದಿಲ್ಲ, ಈ ವಿಚಾರದಲ್ಲಿ ಕೆಲವು ನಿರ್ಧಾರಗಳನ್ನು ಸಿಎಂ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಇದಕ್ಕೆ ಸಂಬಂಧಿಸಿದ ವಿಚಾರಗಳು ನ್ಯಾಯಾಲಯದಲ್ಲಿವೆ. ಆದಷ್ಟು ಬೇಗ ಪ್ರಕರಣಗಳನ್ನು ಇತ್ಯರ್ಥಗೊಳಿಸಿಕೊಳ್ಳುವ ಕೆಲಸ ಸಾರಿಗೆ ಇಲಾಖೆ ಮಾಡಲಿದೆ. ಸುಲಭವಾಗಿ ಈಡೇರಿಸಲು ಸಾಧ್ಯವಾಗುವ ಬೇಡಿಕೆಗಳನ್ನು ನಮ್ಮ ಮುಂದಿಡಲು ಅವರಲ್ಲಿ ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು.
ಬಂದ್‌ನಿಂದ ಒಂದೆರಡು ಅಹಿತಕರ ಘಟನೆಗಳು ನಡೆದಿವೆ. ಯಾರೂ ಬಲವಂತದ ಬಂದ್ ಮಾಡದಂತೆ ಈಗಾಗಲೇ ಸೂಚನೆ ನೀಡಿದ್ದೇನೆ. ಮಧ್ಯಾಹ್ನ 12.30 ಕ್ಕೆ ಫ್ರೀಡಂ ಪಾರ್ಕ್ ಗೆ ತೆರಳಿ ಅವರ ಮನವಿ ಸ್ವೀಕರಿಸುತ್ತೇನೆ. ಆದಷ್ಟು ಬೇಗ ಒಕ್ಕೂಟದ ಬೇಡಿಕೆ ಈಡೇರಿಸುವ ಕೆಲಸ ಆಗಲಿದೆ ಎಂದು ರಾಮಲಿಂಗಾ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಖಾಸಗಿ ಸಾರಿಗೆ ಒಕ್ಕೂಟದ ಪ್ರಮುಖ ಬೇಡಿಕೆಗಳೇನು?
* ಖಾಸಗಿ ಬಸ್‌ಗಳನ್ನ ಶಕ್ತಿಯೋಜನೆ ವ್ಯಾಪ್ತಿಗೆ ತರಬೇಕು
* 3.64 ಲಕ್ಷ ಆಟೋ ಚಾಲಕರಿಗೆ ಮಾಸಿಕ 10 ಸಾವಿರ ನೀಡಬೇಕು
* ರ‍್ಯಾಪಿಡೋ ಬೈಕ್ ಟ್ಯಾಕ್ಸಿ ನಿಷೇಧ ಮಾಡಬೇಕು
* 10-15 ಲಕ್ಷ ಮೌಲ್ಯದ ವಾಹನಗಳಿಗೆ ಜೀವಿತಾವಧಿ ತೆರಿಗೆ ಬದಲು ಈ ಹಿಂದಿನ ನಿಯಮವೇ ಜಾರಿಗೆ * ತರಬೇಕು
* ಏರ್‌ಪೋರ್ಟ್ ಟ್ಯಾಕ್ಸಿಗಳಿಗೆ ಒಂದೇ ದರ ನಿಗದಿ ಮಾಡಬೇಕು
* ಅಸಂಘಟಿತ ವಾಣಿಜ್ಯ ಚಾಲಕರ ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು
* ಚಾಲಕರಿಗೆ ವಸತಿ ಯೋಜನೆ ನೀಡಬೇಕು
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.