ಮಂಗಳೂರು: ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಮಿಥುನ್ ರೈ ಉಡುಪಿ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು ಎಂದು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೇ ವಿಚಾರವಾಗಿ ಮಿಥುನ್ ರೈ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ನಾನು ಏನೇ ಮಾತಾಡಿದರೂ ಅದು ಪೇಜಾವರ ಶ್ರೀಗಳ ಭಾಷಣದಿಂದ ಉಲ್ಲೇಖಿಸಲ್ಪಟ್ಟಿದೆ , ಅದು ನನ್ನ ವೈಯಕ್ತಿಕ ಹೇಳಿಕೆಯಲ್ಲ ಎಂದು ಬರದುಕೊಂಡಿದ್ದಾರೆ.
ಉಡುಪಿ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು ಎಂಬ ಮಿಥುನ್ ರೈ ಹೇಳಿಕೆಗೆ ಉಡುಪಿ ಶಾಸಕ ಕೆ ರಘುಪತಿ ಭಟ್ ಆಕ್ಷೇಪಿಸಿದ್ದರು. ಮುಸಲ್ಮಾನ ಅರಸರು ಯಾವುದೇ ಜಾಗವನ್ನು ಕೃಷ್ಣಮಠಕ್ಕಾಗಲಿ ಅನಂತೇಶ್ವರಕ್ಕಾಗಲಿ ನೀಡಿಲ್ಲ. ಅನಂತೇಶ್ವರ ದೇಗುಲಕ್ಕೆ ರಾಮಭೋಜನು ಭೂಮಿ ಕೊಟ್ಟ ಬಗ್ಗೆ ಉಲ್ಲೇಖ ಇದೆ. ಮುಂದೆ ಆ ಭೂಮಿಯೆ ಕೃಷ್ಣ ಮಠಕ್ಕೆ ಬಳಕೆಯಾಗಿದೆ. ಅನಂತೇಶ್ವರ ದೇಗುಲ ನಂತರ ಕೃಷ್ಣ ಮಠ ನಿರ್ಮಾಣಗೊಂಡಿದೆ ಎಂದಿದ್ದರು. ಅಷ್ಟೇ ಅಲ್ಲದೇ ಉಡುಪಿಯ ಪೇಜಾವರ ಶ್ರೀಗಳು, ನಟ ರಕ್ಷಿತ್ ಶೆಟ್ಟಿ, ಸೇರಿದಂತೆ ರಾಜಕೀಯ ನಾಯಕರು ಮಿಥುನ್ ರೈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಕಾಂಗ್ರೆಸ್ ನಾಯಕ ಮಿಥುನ್ ರೈ ಪತ್ರಿಕೆಗಳಲ್ಲಿ ಬಂದಿದ್ದ ವರದಿ ನೋಡಿ ನಾನು ಹೇಳಿಕೆ ನೀಡಿದ್ದೇನೆ. ನಾನು ಸೌಹಾರ್ದಯುತ ಹೇಳಿಕೆ ನೀಡಿದ್ದೇನೆ ಎಂದು ತಮ್ಮ ಹೇಳಿಯನ್ನು ಸಮರ್ಥೀಸಿಕೊಂಡಿದ್ದರು. ಇದೀಗ ಮತ್ತೆ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.