ಬೆಂಗಳೂರು : ಜೆಡಿಎಸ್‌ನ ಇಬ್ಬರು ಮಾಜಿ ಶಾಸಕರಾದ ಆರ್.ಮಂಜುನಾಥ್ (ದಾಸರಹಳ್ಳಿ) ಮತ್ತು ಡಿ.ಸಿ ಗೌರಿ ಶಂಕರ್ (ತುಮಕೂರು ಗ್ರಾಮಾಂತರ) ಇಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇಬ್ಬರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಆರ್.ಮಂಜುನಾಥ್ ಜೊತೆ 2018ರಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಪ್ರಸಾದ್ ಗೌಡ, ಜೆಡಿಎಸ್ ವಕ್ತಾರ ಚರಣ್ ಗೌಡ ಸೇರಿದಂತೆ ದಾಸರಹಳ್ಳಿಯ 100ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಗೌರಿಶಂಕರ್ ಜೊತೆಗೆ ನೂರಕ್ಕೂ ಹೆಚ್ಚು ಮಂದಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಸೇರಿದರು. ಶಾಸಕರಾದ ಎಂ.ಪಿ ನರೇಂದ್ರ ಸ್ವಾಮಿ ಹಾಗೂ ಶ್ರೀನಿವಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೋಮುವಾದಿ ಜೆಡಿಎಸ್ ಬಿಟ್ಟು ಜಾತ್ಯಾತೀತ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಇಬ್ಬರಿಗೂ ನಾನು ಸ್ವಾಗತ ಕೋರುತ್ತೇನೆ. ನಾನು ಜೆಡಿಎಸ್‌ನಲ್ಲಿ ಆರು ವರ್ಷ ಇದ್ದೆ. ನಾನು ಇರೋ ತನಕ ಬಿಜೆಪಿ ಜೊತೆ ಸಂಬಂಧ ಇಟ್ಟುಕೊಳ್ಳಬಾರದು ಎಂದಿದ್ದೆ. ಈಗ ಜೆಡಿಎಸ್‌ನವರು ಬಿಜೆಪಿ ಜೊತೆಗೆ ಸೇರಿದ್ದಾರೆ. ಹಾಗಾಗಿ, ಜೆಡಿಎಸ್‌ನಿಂದ ‘ಎಸ್’ ಅನ್ನು ತೆಗೆದುಹಾಕಬೇಕು. ಅವರು ತೆಗೆದಿಲ್ಲ ಅಂದ್ರೆ ಜನರೇ ತೆಗೆದು ಹಾಕುತ್ತಾರೆ ಎಂದರು. ಗೌರಿಶಂಕರ್ ಅವರು ಚೆನ್ನಿಗಪ್ಪ ಅವರ ಮಗ. ಅವರ ತಂದೆ ನಾವು ಎಲ್ಲಾ ಒಟ್ಟಿಗೆ ಜೆಡಿಎಸ್‌ನಲ್ಲಿ ಇದ್ವಿ ಎಂದು ಹೇಳಿದರು.


ಜೆಡಿಎಸ್‌ನವರು ಯಡಿಯೂರಪ್ಪ ಜೊತೆಗೆ ಸೇರಿ ಸರ್ಕಾರ ಮಾಡಿದ್ರು. ನಂತರ ಯಡಿಯೂರಪ್ಪ ಅವರಿಗೆ 20 ತಿಂಗಳು ಅಧಿಕಾರ ಕೊಡಲಿಲ್ಲ. ಈಗ ಯಡಿಯೂರಪ್ಪ ಮಗ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಜೆಡಿಎಸ್ ಅದೇನ್ ಪಾರ್ಟಿ ಅಲ್ಲ, ದೇವೇಗೌಡ ಅಂಡ್ ಫ್ಯಾಮಿಲಿ. ದೇವೇಗೌಡರು ಇರುವ ತನಕ ಜೆಡಿಎಸ್ ಇರುತ್ತೆ. ಅಮೇಲೆ ಬಿಜೆಪಿ ಜೊತೆ ವಿಲೀನ ಆಗಬಹುದು. ಬಿಜೆಪಿಯವರಿಗಿಂತ ಕುಮಾರಸ್ವಾಮಿನೇ ಹೆಚ್ಚು ಮಾತನಾಡ್ತಾರೆ. ಬಿಜೆಪಿಯರು ಕುಮಾರಸ್ವಾಮಿಯನ್ನು ಛೂ ಬಿಟ್ಟಿದ್ದಾರೆ ಎಂದರು.
ಗೌರಿಶಂಕರ್, ಮಂಜುನಾಥ್, ಪ್ರಸಾದ್ ಗೌಡಗೆ ನಮೋ ನಮಃ
ತನ್ನ ಭಾಷಣದಲ್ಲಿ ಕಾಂಗ್ರೆಸ್ ಸೇರಿದ ಮೂವರಿಗೆ ಸಿಎಂ ಸಿದ್ದರಾಮಯ್ಯ ನಮೋ ನಮಃ ಎಂದು ಹೇಳಿದರು. ನೀವೆಲ್ಲ ಕಾಂಗ್ರೆಸ್‌ಗೆ ಬಂದು ಒಳ್ಳೆಯ ಕೆಲಸ ಮಾಡಿದ್ದೀರ. ಬಹಳ ಬೇಗ ಜಾಗೃತರಾಗಿದ್ದೀರಿ. ಜೆಡಿಎಸ್‌ನ ಕುಟಿಲತನವನ್ನ ಬೇಗ ಅರ್ಥ ಮಾಡಿಕೊಂಡಿದ್ದೀರಿ. ನಿಮ್ಮ ಸ್ನೇಹಿತರಿಗೂ ಸ್ವಲ್ಪ ಹೇಳಿಯಪ್ಪ ಎಂದರು.
ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದ ಆರ್. ಮಂಜುನಾಥ್, ಡಿ.ಕೆ ಶಿವಕುಮಾರ್ ಅವರ ಸಂಘಟನೆ, ಸಿದ್ದರಾಮಯ್ಯನವರ ಆಡಳಿತ ಮೆಚ್ಷಿ ನಮ್ಮ ಕ್ಷೇತ್ರದ ಮತದಾರರಿಗೆ ನ್ಯಾಯ ಒದಗಿಸಬೇಕೆಂದು ಕಾಂಗ್ರೆಸ್‌ಗೆ ಬಂದಿದ್ದೇವೆ. ನನಗೆ ಬಹಳ ಸಂತೋಷ ಆಗ್ತಿದೆ. ನಾನು ಕಳೆದ 35 ವರ್ಷ ಕಾಂಗ್ರೆಸ್‌ನಲ್ಲೇ ಇದ್ದೆ. ಎಸ್. ಎಂ ಕೃಷ್ಣ ಅವರ ಜೊತೆ 19 ವರ್ಷ ಇದ್ದೆ. ಅವರು ಗೌವರ್ನರ್ ಆಗೋವರೆಗೂ ಕಾಂಗ್ರೆಸ್‌ನಲ್ಲೇ ಇದ್ದೆ. ಜನ ನನನ್ನು ಕರೆದು ನೀವು ಶಾಸಕರಾಗಿ ಎಂದರು. ಮೊದಲ ಸಲ ಆಯ್ಕೆ ಆದೆ, ಎರಡನೇ ಸಲ ನನ್ನದೆ ತಪ್ಪು. 24 ಗಂಟೆ ಕೆಲಸ ಮಾಡಿದ್ದೆ ಆದ್ರೆ 3-4 ಸಾವಿರ ವೋಟ್‌ಗಳಿಂದ ಸೋತೆ ಎಂದು ಹೇಳಿದರು.
ಬಿಜೆಪಿಯವರು ನಮಗೆ ತುಂಬಾ ತೊಂದರೆ ಕೊಟ್ಟಿದ್ದಾರೆ. ಈಗ ಜೆಡಿಎಸ್ ಅವರ ಜೊತೆ ಕೈ ಜೋಡಿಸಿದೆ. ಅದು ನಮಗೆ ಇಷ್ಟ ಆಗಿಲ್ಲ. ಯಾಕೆಂದರೆ ಬಿಜೆಪಿಯವರು ನಮ್ಮ ಕ್ಷೇತ್ರದಲ್ಲಿ ಅಭಿವೃದ್ದಿ ಮಾಡೋಕೆ ಬಿಟ್ಟಿಲ್ಲ. ಅನುದಾನ ಕೊಟ್ಟಿಲ್ಲ. ನಮಗೆ ತುಂಬಾ ಕಷ್ಟ ಆಗಿತ್ತು. ಹಾಗಾಗಿ, ಕಾಂಗ್ರೆಸ್ ಸೇರಲು ತೀರ್ಮಾನಿಸಿದೆ. ಬಿಜೆಪಿಯವರು ಸುಳ್ಳನ್ನು ತಲೆ ಮೇಲೆ ಹೊಡೆದ ಹಾಗೆ ಹೇಳ್ತಾರೆ. ನಮ್ಮ ಕಾಂಗ್ರೆಸ್‌ನಲ್ಲಿ ಯಾರು ಆ ತರ ಮಾಡೋದಿಲ್ಲ.ಕಾಂಗ್ರೆಸ್‌ಗೆ ಯಾವುದೇ ಕಳಂಕ ಇಲ್ಲ. ಸಿದ್ದರಾಮಯ್ಯ , ಡಿಕೆಶಿ ಅಂದ್ರೆ ನಮಗೆ ತುಂಬಾ ಅಭಿಮಾನ. ನಮ್ಮ ಕ್ಷೇತ್ರಕ್ಕೆ ಒತ್ತು ನೀಡಿ ನಮಗೆ ಯಾವುದೇ ಆಸೆ, ಆಕಾಂಕ್ಷಿಗಳಿಲ್ಲಎಂದು ಮನವಿ ಮಾಡಿದರು.
ದಾಸರಹಳ್ಳಿ ಕ್ಷೇತ್ರದಲ್ಲಿ 5 ಲಕ್ಷ ಮತದಾರರಿದ್ದಾರೆ. ಗೌರಿಶಂಕರ್ ಅವರಿಗೆ ತುಮಕೂರಲ್ಲಿ ಸಚಿವರಿದ್ದಾರೆ. ಅವರು ನೋಡಿಕೊಳ್ತಾರೆ. ನಮ್ಮ ಕ್ಷೇತ್ರದಲ್ಲಿ ಬಡವರು ಸಾಮನ್ಯ ವರ್ಗದವರಿದ್ದಾರೆ. ಕೆಲಸ ಮಾಡಲು ಆಗ್ತಿಲ್ಲ. ಹೈಕೋರ್ಟ್ ಗೆ ಹೋಗಿ ಅನುದಾನ ತಂದಿದ್ದೇನೆ. ಬಿಜೆಪಿಯವರು 1 ತಿಂಗಳಿಗೆ 5 ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಹಿಂದೆ ನಮಗೆ ಬಹಳ ತೊಂದರೆ ಕೊಟ್ಟಿದ್ದಾರೆ ಎಂದು ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.