ಬೆಂಗಳೂರು: ಇಬ್ಬರು ಮಹಿಳಾ ಅಧಿಕಾರಿಗಳು ಕಾನೂನು ಪಾಲಿಸಲು ಸೂಚಿಸಿದ್ದೇವೆ. ರೂಲ್ಸ್ ಫಾಲೋ ಮಾಡುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಐಪಿಎಸ್ ಅಧಿಕಾರಿ ಡಿ ರೂಪಾ ಹಾಗೂ ಐಎಎಸ್ ಆಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಪರಸ್ಪರ ಆರೋಪ-ಪ್ರತ್ಯಾರೋಪ, ದೂರುಗಳ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿ, ನಿಯಮ ಪಾಲನೆ ಮಾಡುವಂತೆ ಹೇಳಿದ್ದೇವೆ. ಇದರ ಬಗ್ಗೆ ಮುಖ್ಯ ಕಾರ್ಯದರ್ಶಿಯೂ ಗಮನ ಹರಿಸಿದ್ದಾರೆ. ಮುಖ್ಯಕಾರ್ಯದರ್ಶಿಯವರು ಇಬ್ಬರು ಅಧಿಕಾರಿಗಳನ್ನು ಕರೆದು ಮಾತನಾಡಿದ್ದಾರೆ. ಅವರಿಗೆ ನಿರ್ದೇಶನ ನೀಡಿದ್ದಲ್ಲದೆ, ಶಿಸ್ತು ಕಾಪಾಡಿಕೊಳ್ಳಿ ಎಂದು ಹೇಳಿದ್ದಾರೆ.
ಇಬ್ಬರು ಈ ಬಗ್ಗೆ ಲಿಖಿತವಾಗಿ ಬರೆದುಕೊಟ್ಟಿದ್ದಾರೆ. ನಿಯಮ ಪಾಲಿಸುತ್ತೇವೆ ಎಂದು ಬರೆದುಕೊಟ್ಟಿದ್ದಾರೆ ಎಂದು ಹೇಳಿದರು. ಭಾರತೀಯ ಸೇವಾ ನಿಯಮಾವಳಿ ಪ್ರಕಾರ ಏನಿದೆಯೋ ಅದರ ಮೇಲೆ ಪರಿಶೀಲನೆ ಮಾಡುತ್ತಿದ್ದಾರೆ. ಅದರ ಪ್ರಕಾರವೇ ಆ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು. ಡಿ ರೂಪಾ, ರೋಹಿಣಿ ಸಿಂಧೂರಿಯವರ ಖಾಸಗಿ ವಾಟ್ಸಾಪ್ ಚಾಟ್ ಸ್ಕ್ರೀನ್ ಶಾಟ್ ಪ್ರಕಟಿಸಿದ್ದರು.
ಈಕೆ ಕೆಲವು ಐಎಎಸ್ ಅಧಿಕಾರಿಗಳಿಗೆ ಒಂದಲ್ಲ, ಎರಡಲ್ಲ, ಅನೇಕರಿಗೆ ತನ್ನ ಅಶ್ಲೀಲ ಚಿತ್ರಗಳನ್ನು ಕಳಿಸಿರುವ ಹಾಗೂ ಅವರನ್ನು ಉತ್ತೇಜಿಸುವ ಕಾರ್ಯ ಮಾಡಿರುವ ಆಪಾದನೆ ಇದೆ. ಆ ಪಿಕ್ಸ್ಗಳು ನನಗೆ ಸಿಕ್ಕಿವೆ. ಇದು ಖಾಸಗಿ ವಿಷಯ ಆಗುವುದಿಲ್ಲ ಅಂತ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಂಧೂರಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ವೈಯಕ್ತಿಕ ಹಗೆಯನ್ನ ಸಾಧಿಸಲು ಹೊರಡುವುದು ಸಮಾಜಕ್ಕೆ ಬಹಳಷ್ಟು ಅಪಾಯಕಾರಿ. ರೂಪಾ ಐಪಿಎಸ್ ಅವರು, ಜವಾಬ್ದಾರಿಯುತ ಸ್ಥಾನದಲ್ಲಿದ್ದು, ನನ್ನ ಮೇಲೆ ವೈಯಕ್ತಿಕ ಹಗೆಯನ್ನ ಸಾಧಿಸಲು ಮಾನಸಿಕ ಸ್ಥಿಮಿತೆಯನ್ನು ಕಳೆದುಕೊಂಡಿರುವವರ ರೀತಿಯಲ್ಲಿ ಆಡುತ್ತಿದ್ದಾರೆ ಅಂತ ಟಾಂಗ್ ಕೊಟ್ಟಿದ್ದರು.
ಇನ್ನೂ ಇದೇ ವಿಚಾರವಾಗಿ ಸಚಿವ ಆರಗ ಜ್ಞಾನೇಂದ್ರ , ಮಾಧುಸ್ವಾಮಿ ಕೂಡಾ ಗರಂ ಆಗಿದ್ದರು, ಸಿಎಂ ಜೊತೆ ಚರ್ಚಿಸಿ ಸೂಕ್ತ ಕ್ರಮ ವಹಿಸೋದಾಗಿ ಹೇಳಿದ್ದರು.