Saturday, June 10, 2023
spot_img
- Advertisement -spot_img

ಸಚಿವರಾಗ್ಬೋದು, ಸ್ಪೀಕರ್ ಆಗೋ ಅವಕಾಶ ಎಲ್ಲರಿಗೂ ಸಿಗಲ್ಲ:ಯು.ಟಿ.ಖಾದರ್

ಬೆಂಗಳೂರು: ಸ್ಪೀಕರ್ ಜವಾಬ್ದಾರಿ ವಹಿಸಿ ಪಾರದರ್ಶಕವಾಗಿ ಸದನ ನಡೆಸಿಕೊಂಡು ಹೋಗುತ್ತೇನೆ ಎಂದು ಕಾಂಗ್ರೆಸ್ ನಾಯಕ ಯು.ಟಿ. ಖಾದರ್ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹಮ್ಮದ್ ಖಾನ್, ಶಾಸಕ ಅಜಯ್ ಸಿಂಗ್ ಅವರೊಂದಿಗೆ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ಇಂದು ನಾಮಪತ್ರ ಸಲ್ಲಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಸಚಿವ ಸ್ಥಾನ ಎಲ್ಲರಿಗೂ ಸಿಗುತ್ತದೆ. ಆದರೆ ಸ್ಪೀಕರ್ ಆಗುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ, ಈ ಹಿಂದೆ ಸಚಿವನಾಗಿ ಕೆಲಸ ಮಾಡಿದ್ದೇನೆ, ಇದು ಸಂವಿಧಾನ ಬದ್ಧವಾದ, ಗೌರವದ ಹುದ್ದೆ. ನಾಮಪತ್ರ ಸಲ್ಲಿಸುವಂತೆ ಹೈಕಮಾಂಡ್ ಸೂಚಿಸಿದ್ದು, ಒಪ್ಪಿದ್ದೇನೆ ಎಂದರು.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್ ಮುಂತಾದವರು ಚರ್ಚೆ ಮಾಡಿ ಒಮ್ಮತದಿಂದ ಪ್ರಮುಖ ಜವಾಬ್ದಾರಿ ನೀಡಿದ್ದಾರೆ. ಜನರ, ಪಕ್ಷದ, ಕ್ಷೇತ್ರದ ಆಶೀರ್ವಾದ ನನ್ನ ಮೇಲಿದೆ ಎಂದು ಹೇಳಿದರು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಪಕ್ಷ ಅವರನ್ನು ಆಯ್ಕೆ ಮಾಡಿದೆ. ಹೈಕಮಾಂಡ್ ಜತೆ ಚರ್ಚೆ ಮಾಡಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಸ್ಪೀಕರ್ ಸ್ಥಾನಕ್ಕೆ ಯು.ಟಿ.ಖಾದರ್ ಅವರನ್ನು ಆಯ್ಕೆ ಮಾಡಿರುವುದು ಪಕ್ಷದ ತೀರ್ಮಾನ. ಹೊಸ ಮುಖ, ಯುವಕರಿಗೆ ಜವಾಬ್ದಾರಿ ಕೊಡಬೇಕು ಎಂದು ತೀರ್ಮಾನ ಆಗಿದೆ ಎಂದರು.

ಕಾಂಗ್ರೆಸ್ ನಾಯಕರಾದ ಶ್ರೀ ಯು.ಟಿ. ಖಾದರ್ ಅವರು ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಇಂದು ನಾಮಪತ್ರ ಸಲ್ಲಿಸಿದರು. ಈ ವೇಳೆ ಜೊತೆಗಿದ್ದು ಅವರಿಗೆ ಶುಭ ಹಾರೈಸಿದೆ ಎಂದು ಡಿಕೆಶಿವಕುಮಾರ್ ಬರೆದಿದ್ದು, ಪೋಟೋಸ್ ಶೇರ್ ಮಾಡಿಕೊಂಡಿದ್ದಾರೆ.

Related Articles

- Advertisement -spot_img

Latest Articles