ಚೆನ್ನೈ: ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ಅವರು ‘ಸನಾತನ ಧರ್ಮ’ದ ಕುರಿತು ನೀಡಿರುವ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಬಿಜೆಪಿ ಮುಖಂಡ ಕೆ.ಅಣ್ಣಾಮಲೈ, ‘ಕ್ರಿಶ್ಚಿಯನ್ ಮಿಷನರಿಗಳು ಬೆಳೆಸುವ ಕಲ್ಪನೆ’ ಎಂದು ಆರೋಪಿಸಿದ್ದಾರೆ.
‘ಸನಾತನ ಧರ್ಮ’ವನ್ನು ಡೆಂಗ್ಯೂ ಸೊಳ್ಳೆಗಳು, ಮಲೇರಿಯಾ ಮತ್ತು ಕರೋನಾಕ್ಕೆ ಉದಯನಿಧಿ ಹೋಲಿಸಿದ್ದರು. ಸಾಲದ್ದಕ್ಕೆ, ‘ಅದನ್ನು ವಿರೋಧಿಸಬಾರದು, ನಿರ್ಮೂಲನೆ ಮಾಡಬೇಕು’ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ, (K.Annamalai) ಸ್ಟಾಲಿನ್ ಕುಟುಂಬವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ರಾಜ್ಯದ ಜಿಡಿಪಿಯನ್ನು ಮೀರಿಸುವಷ್ಟು ಸಂಪತ್ತನ್ನು ಸಂಗ್ರಹಿಸುವುದು ಅವರ ಏಕೈಕ ಸಂಕಲ್ಪವಾಗಿದೆ’ ಎಂದು ಆರೋಪಿಸಿದರು.
ಈ ಕುರಿತು ಟ್ವೀಟ್ ಮಾಡಿರುವ ಅಣ್ಣಾಮಲೈ, ‘ಪಾಲಪುರಂ (ಕರುಣಾನಿಧಿ) ಕುಟುಂಬ ಹೊಂದಿರುವ ಏಕೈಕ ಸಂಕಲ್ಪವೆಂದರೆ ರಾಜ್ಯದ ಜಿಡಿಪಿಯನ್ನು ಮೀರಿ ಸಂಪತ್ತನ್ನು ಸಂಗ್ರಹಿಸುವುದು. ತಿರು ಉದಯನಿಧಿ, ನೀವು, ನಿಮ್ಮ ತಂದೆ; ನಿಮ್ಮ ಆದರ್ಶವಾದಿಗಳು ಕ್ರಿಶ್ಚಿಯನ್ ಮಿಷನರಿಗಳಿಂದ ಖರೀದಿಸಿದ ಕಲ್ಪನೆಯನ್ನು ಹೊಂದಿದ್ದೀರ, ಅವರ ದುರುದ್ದೇಶಪೂರಿತ ಸಿದ್ಧಾಂತವನ್ನು ಗಿಳಿಪಾಠದಂತೆ ಒಪ್ಪಿಸಲು ನಿಮ್ಮಂಥ ಮಂದಬುದ್ಧಿಗಳನ್ನು ಬೆಳೆಸುವುದು ಆ ಮಿಷನರಿಗಳ ಆಲೋಚನೆಯಾಗಿದೆ’ ಎಂದು ಕಿಡಿಕಾರಿದ್ದಾರೆ.
‘ತಮಿಳುನಾಡು ಆಧ್ಯಾತ್ಮಿಕತೆಯ ನಾಡು. ನೀವು ಮಾಡಬಹುದಾದ ಅತ್ಯುತ್ತಮವಾದುದೆಂದರೆ ಈ ರೀತಿಯ ಕಾರ್ಯಕ್ರಮಗಳಲ್ಲಿ ಮೈಕ್ ಹಿಡಿದುಕೊಳ್ಳುವುದು ಮತ್ತು ನಿಮ್ಮ ಹತಾಶೆಯನ್ನು ಹೊರಹಾಕುವುದು ಅಷ್ಟೇ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ಚೆನ್ನೈನಲ್ಲಿ ನಡೆದಿದ್ದ ‘ಸನಾತನ ನಿರ್ಮೂಲನಾ’ ಸಮಾವೇಶದಲ್ಲಿ ಮಾತನಾಡಿದ್ದ ತಮಿಳುನಾಡು ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವ ಉದಯನಿಧಿ ಸ್ಟಾಲಿನ್, ‘ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ಅವುಗಳನ್ನು ನಿರ್ಮೂಲನೆ ಮಾಡಬೇಕು. ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕರೋನಾವನ್ನು ವಿರೋಧಿಸಲು ಸಾಧ್ಯವಿಲ್ಲ. ಆದರೆ, ನಾವು ಅವುಗಳನ್ನು ನಿರ್ಮೂಲನೆ ಮಾಡಬೇಕು. ಅದೇ ರೀತಿ ನಾವು ಸನಾತನವನ್ನು (ಸನಾತನ ಧರ್ಮ) ನಿರ್ಮೂಲನೆ ಮಾಡಬೇಕು. ಕೇವಲ ಸನಾತನವನ್ನು ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಬೇಕು’ ಎಂದು ಹೇಳಿದ್ದರು.
ಇದನ್ನೂ ಓದಿ; ‘ಸನಾತನ ಧರ್ಮದ ಕುರಿತು ನನ್ನ ಹೇಳಿಕೆಗೆ ಬದ್ಧ; ಕಾನೂನು ಸವಾಲು ಎದುರಿಸಲು ಸಿದ್ಧ’
ಸನಾತನ ಧರ್ಮ ಶತಮಾನಗಳಿಂದ ಅಸ್ತಿತ್ವದಲ್ಲಿದೆ
ಹಿಂದೂ ಮಹಾಸಭಾದ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಕೂಡ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು ವಿರೋಧಿಸಿದ್ದಾರೆ. ಇಂಡಿಯಾ ಮೈತ್ರಿಕೂಟವು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹೋರಾಡಬೇಕು. ಬದಲಿಗೆ ಅವರು ‘ಸನಾತನ ಧರ್ಮ’ದೊಂದಿಗೆ ಹೋರಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಸನಾತನ ಧರ್ಮ ಶತಮಾನಗಳಿಂದ ಅಸ್ತಿತ್ವದಲ್ಲಿದೆ ಮತ್ತು ಹಾಗೆಯೇ ಇರುತ್ತದೆ. ಇಂಡಿಯಾ ಮೈತ್ರಿಕೂಟದೊಂದಿಗೆ ಸಂಪರ್ಕ ಹೊಂದಿರುವ ಜನರು ಪ್ರಧಾನಿ ಮೋದಿಯವರೊಂದಿಗೆ ಹೋರಾಡುತ್ತಿಲ್ಲ. ಅವರು ‘ಸನಾತನ ಧರ್ಮ’ದೊಂದಿಗೆ ಹೋರಾಡುತ್ತಿದ್ದಾರೆ. ಅವರ ಉದ್ದೇಶ ‘ಸನಾತನ ಧರ್ಮ’ವನ್ನು ಮುಗಿಸುವುದು. ಆದರೆ, ನಾವು ಎಂದಿಗೂ ಸ್ಟಾಲಿನ್ ಸಿದ್ಧಾಂತವನ್ನು ಗುರಿಯಾಗಿಸಿಕೊಳ್ಳುವುದಿಲ್ಲ. ಕ್ರಿಶ್ಚಿಯನ್ ಧರ್ಮ ಅಥವಾ ಇಸ್ಲಾಂ ಧರ್ಮದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಆದರೂ ಅವರು ‘ಹಿಂದೂ ಸನಾತನ’ವನ್ನು ಏಕೆ ಗುರಿಯಾಗಿಸಿಕೊಂಡಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.