ಹೈದರಾಬಾದ್ : ತೆಲಂಗಾಣದಲ್ಲಿ ಮುಂದಿನ ಸರಣಿ ಚುನಾವಣೆಗಳಿಗೆ ಸಮರ ಸಾರಿರುವ ಕೇಂದ್ರ ಸಚಿವ ಅಮಿತ್ ಶಾ ಇಂದು ಅಲ್ಲಿನ ಎದುರಾಳಿ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ತೆಲಂಗಾಣ ಸೇರಿದಂತೆ ವಂಶಪಾರಂಪರ್ಯ ರಾಜಕೀಯ ವಿಚಾರವಾಗಿ ಕಿಡಿಕಾರಿದ ಅವರು, ಕಾಂಗ್ರೆಸ್, ಬಿಆರ್‌ಎಸ್ ಮತ್ತು ಎಐಎಂಐಎಂ 4ಜಿ, 3ಜಿ, 2ಜಿ ಪಕ್ಷಗಳು ಎಂದು ಲೇವಡಿ ಮಾಡಿದರು.
ಖಮ್ಮಂನಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ‘ಕಾಂಗ್ರೆಸ್ 4ಜಿ ಪಕ್ಷ, ಇದರಲ್ಲಿ ಜವಾಹರ್‌ಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ರಾಹುಲ್ ಗಾಂಧಿ ಹೀಗೆ ನಾಲ್ಕು ತಲೆಮಾರುಗಳು ಈ ಪಕ್ಷದಲ್ಲಿವೆ. ಇನ್ನು ಕೆಸಿಆರ್ ಅವರದ್ದು 2ಜಿ ಪಕ್ಷ, ಓವೈಸಿ ಅವರದ್ದು 3ಜಿ ಪಕ್ಷ’ ಎಂದು ಕಾಲೆಳೆದರು.
‘ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಪಕ್ಷವು ಭ್ರಷ್ಟ ಮತ್ತು ದಬ್ಬಾಳಿಕೆ ಆಡಳಿತ ನಡೆಸುತ್ತಿದೆ. ಅದಕ್ಕೆ ಅಸಾದುದ್ದೀನ್ ನೇತೃತ್ವದ ಎಐಎಂಐಎಂ ಪಕ್ಷವು ಬೆಂಬಲ ನೀಡುತ್ತಿದ್ದು, ಇವರೆಲ್ಲ ಶೀಘ್ರದಲ್ಲೇ ಅಧಿಕಾರದಿಂದ ಇಳಿಯುವ ಸಮಯ ಹತ್ತಿರಕ್ಕೆ ಬಂದಿದೆʼ ಎಂದರು.
ಹೈದರಾಬಾದ್ ಭಾರತದೊಂದಿಗೆ ಸೇರಿಸಿದ್ದು ಕಾಂಗ್ರೆಸ್: ಖರ್ಗೆ
ಇನ್ನು ನಿನ್ನೆಯಷ್ಟೇ ತೆಲಂಗಾಣದಲ್ಲಿ ಮಾತನಾಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಈ ಹಿಂದೆ ಕಾಂಗ್ರೆಸ್ 70 ವರ್ಷಗಳಲ್ಲಿ ಏನೂ ಮಾಡಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದರು. ಆದರೆ, ಈಗ ಅವರ ಆಡಳಿತ ಅವಧಿ ತೆಗೆದು ಹಾಕಿ 53 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ? ಎಂದು ಕೇಳ್ತಿದ್ದಾರೆ. ನಾಳೆ ಅಮಿತ್ ಶಾ ಬರ್ತಿದ್ದಾರೆ. ಅವರು ಕಾಂಗ್ರೆಸ್ ಏನು ಮಾಡಿದೆ ಎಂದು ರಿಪೋರ್ಟ್ ಕಾರ್ಡ್ ಕೇಳಿದರೆ, ಅವರಿಗೆ ಇಸ್ರೋ ಮಾಡಿದ್ದು ನಾವು , ಹೈದರಾಬಾದ್ ಅನ್ನು ಭಾರತದೊಂದಿಗೆ ಸೇರಿಸಿದ್ದು ಕಾಂಗ್ರೆಸ್ ಅಂತ ಹೇಳಿ ಎಂದು ವಾಗ್ದಾಳಿ ನಡೆಸಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.