ನವದೆಹಲಿ: ಹಾಲಿವುಡ್‌ನವರು ಬಾಹ್ಯಾಕಾಶ ಮತ್ತು ಚಂದ್ರನ ಕುರಿತ ಸಿನಿಮಾ ಮಾಡುವುದಕ್ಕೇ 600 ಕೋಟಿಗಿಂತ ಹೆಚ್ಚು ಹಣ ಖರ್ಚು ಮಾಡುತ್ತಾರೆ. ಆದರೆ, ನಾವು 600 ಕೋಟಿ ಬಜೆಟ್‌ನಲ್ಲಿ ಚಂದ್ರಯಾನ-3 ಯೋಜನೆಯನ್ನೇ ಯಶಸ್ವಿಯಾಗಿ ಮುಗಿಸಿದ್ದೇವೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದರು.
ಚಂದ್ರಯಾನದ ವೆಚ್ಚದ ಕುರಿತು ಮಾತನಾಡಿದ ಸಚಿವರು, ನಾನು ಇತ್ತೀಚಿನ ದಿನಗಳಲ್ಲಿ ಸಿನಿಮಾಗಳನ್ನು ಹೆಚ್ಚಾಗಿ ನೋಡುವುದಿಲ್ಲ. ಆದರೆ ಬಾಲಿವುಡ್‌ನ ಕೆಲ ನಟರು ಪ್ರತಿ ಚಿತ್ರಕ್ಕೆ ಬರೋಬ್ಬರಿ 100 ಕೋಟಿ ಸಂಭಾವನೆ ಪಡೆಯುತ್ತಾರೆ ಎಂದು ನನಗೆ ಯಾರೋ ಹೇಳಿದ್ದರು. ಬಾಹ್ಯಾಕಾಶ ಸಿನಿಮಾದ ಬಜೆಟ್‌ಗಿಂತಲೂ ಕಡಿಮೆ ವೆಚ್ಚದಲ್ಲಿ ನಾವು ಚಂದ್ರಲೋಕವನ್ನೇ ತಲುಪಿದ್ದೇವೆ ಎಂದರು.
ಇದನ್ನೂ ಓದಿ: ʼಚಂದ್ರಯಾನ-3ʼ ಯಶಸ್ವಿಗೆ ರಾಷ್ಟ್ರ ನಾಯಕರ ಅಭಿನಂದನೆ
ಚಂದ್ರಯಾನವು ಚಂದ್ರನ ಬಗ್ಗೆ ಹೊಸ ವೈಜ್ಞಾನಿಕ ಸಂಶೋಧನೆಗೆ ದಾರಿ ಮಾಡಿಕೊಡಲಿದೆ. ಚಂದ್ರನ ಮೇಲ್ಮೈಯಲ್ಲಿ ಆಮ್ಲಜನಕ ಮತ್ತು ಹೈಡ್ರೋಜನ್ ಲಭ್ಯತೆಯ ಬಗ್ಗೆ ವೈಜ್ಞಾನಿಕ ಸಂಶೋಧನೆಯು ಚಂದ್ರನ ಮೇಲೆ ಜೀವವಿದೆಯೇ ಎಂದು ನಮಗೆ ನೇರ ಅಥವಾ ಪರೋಕ್ಷ ಉತ್ತರ ಸಿಗಲಿದೆ. ಇತರ ದೇಶಗಳು ನಡೆಸಿರುವ ಚಂದ್ರನ ಕಾರ್ಯಾಚರಣೆಗಳಿಗಿಂತ ನಮ್ಮದು ಭಿನ್ನವಾಗಿರುತ್ತದೆ ಎಂದರು.
ಗುರುವಾರದಿಂದ ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ-3 ರ ಪ್ರಯೋಗಗಳು ಶುರುವಾಗಿದ್ದು, 14 ದಿನಗಳವರೆಗೆ ಇದು ಮುಂದುವರಿಯಲಿದೆ ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.