ಕೋಲ್ಕತ್ತ: ಕೇಂದ್ರ ಸಚಿವ ಸುಭಾಸ್ ಸರ್ಕಾರ್ ಅವರನ್ನು ಬಿಜೆಪಿ ಕಾರ್ಯಕರ್ತರೇ ಪಕ್ಷದ ಕಚೇರಿಯಲ್ಲಿ ಕೂಡಿ ಹಾಕಿರುವ ಘಟನೆ ಪಶ್ವಿಮ ಬಂಗಾಳದ ಬಂಕುಡಾ ನಡೆದಿದೆ.
ಬಂಕುಡಾ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಸುಭಾಸ್, ಸದ್ಯ ಕೇಂದ್ರ ಶಿಕ್ಷಣ ಇಲಾಖೆಯ ರಾಜ್ಯ ಸಚಿವರಾಗಿದ್ದಾರೆ. ಪಕ್ಷದ ಜಿಲ್ಲಾ ಘಟಕದ ಕಚೇರಿಯಲ್ಲಿ ಇಂದು ಮಧ್ಯಾಹ್ನ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಸರ್ಕಾರ್ ಅಧ್ಯಕ್ಷತೆ ವಹಿಸಿದ್ದರು.
ಸಚಿವರು ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಕೊಡುತ್ತಿಲ್ಲ ಹಾಗೂ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿ ಕಾರ್ಯಕರ್ತರು ಸಚಿವರ ವಿರುದ್ಧ ಘೋಷಣೆ ಕೂಗಿದರು, ಬಳಿಕ ಪಕ್ಷದ ಕಚೇರಿಯಲ್ಲೇ ಕೂಡಿ ಹಾಕಿ ಆಕ್ರೋಶ ಹೊರಹಾಕಿದರು.
ಇವರಿಂದಾಗಿಯೇ ಬುಂಕುರಾದ ನಗರಸಭೆಯ ಚುನಾವಣೆಯಲ್ಲಿ ಬಿಜೆಪಿ ಒಂದು ಕ್ಷೇತ್ರದಲ್ಲೂ ಗೆಲುವು ಸಾಧಿಸಲಿಲ್ಲ. ಪಂಚಾಯತ್ ಚುನಾವಣೆಯಲ್ಲೂ ನಿರೀಕ್ಷಿತ ಮಟ್ಟದಲ್ಲಿ ಪಕ್ಷ ಸಾಧನೆ ಮಾಡಿಲ್ಲ. ಇದೊಂದು ಅವಮಾನದ ಸಂಗತಿ ಎಂದು ಘೋಷಣೆ ಕೂಗಿದರು.
ಇದನ್ನೂ ಓದಿ: ತಮಿಳುನಾಡಿಗೆ ʼಕಾವೇರಿʼ ನೀರು ಬಿಡಬಾರದು: ಕಟೀಲ್
ಈ ಘಟನೆ ಬೆನ್ನಲ್ಲೇ ಸ್ಥಳಕ್ಕೆ ಬಂದ ಮತ್ತೊಂದು ಬಣದ ಕಾರ್ಯಕರ್ತರು ಕಚೇರಿ ಬಾಗಿಲು ತೆರೆಯುವಂತೆ ಹೇಳಿದರು. ಈ ವೇಳೆ ಎರಡೂ ಗುಂಪುಗಳ ನಡುವೆ ಗಲಾಟೆಯಾಯಿತು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸಚಿವರನ್ನು ಸುರಕ್ಷಿತವಾಗಿ ಹೊರಗೆ ಕರೆತಂದರು.
ಈ ವಿಡಿಯೋ ಶೇರ್ ಮಾಡಿಕೊಂಡಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ), ಬಿಜೆಪಿಯಲ್ಲಿ ದಿನದಿಂದ ದಿನಕ್ಕೆ ಘರ್ಷಣೆ ಹೆಚ್ಚಾಗುತ್ತಿದ್ದು, ಕೆಲವರಿಗೆ ಅನಗತ್ಯವಾಗಿ ಆದ್ಯತೆ ನೀಡುತ್ತಿರುವುದು ಇದಕ್ಕೆ ಕಾರಣʼ ಎಂದು ಟ್ವೀಟ್ ಮಾಡಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.