ಬೆಂಗಳೂರು : ರಾಜ್ಯದಲ್ಲಿ ಜಾರಿಯಲ್ಲಿರುವ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಪ್ರಸಕ್ತ ವರ್ಷದಲ್ಲಿ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ ಎಂದು ತಿಳಿದು ಬಂದಿದೆ.
ಒಟ್ಟು 23 ಇಲಾಖೆಗಳ ಮೂಲಕ 61 ಕೇಂದ್ರ ಪುರಸ್ಕೃತ ಯೋಜನೆಗಳು ರಾಜ್ಯದಲ್ಲಿ ಚಾಲ್ತಿಯಲ್ಲಿವೆ. ಈ ಯೋಜನೆಗಳಿಗೆ 2022-23ನೇ ಆರ್ಥಿಕ ವರ್ಷದಲ್ಲಿ 10, 447.79 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿತ್ತು. ಆದರೆ, ಈ ವರ್ಷ ಮೂರು ತ್ರೈಮಾಸಿಕಗಳು ಮುಗಿದರೂ, ಒಂದು ರೂಪಾಯಿ ಅನುದಾನ ನೀಡಿಲ್ಲ ಎಂದು ಪ್ರಜಾವಾಣಿ ಪತ್ರಿಕೆ ವರದಿ ಮಾಡಿದೆ.
ಅತ್ತ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ನೆಪ ಹೇಳಿ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಕೊರತೆ ಮಾಡಿದೆ. ಇತ್ತ ಕೇಂದ್ರ ಸರ್ಕಾರ ಕೂಡ ತನ್ನ ಯೋಜನೆಗಳಿಗೆ ಬಿಡಿಗಾಸು ಬಿಡುಗಡೆ ಮಾಡಿಲ್ಲ.
ಇದನ್ನೂ ಓದಿ : ‘ಮೇಕೆದಾಟು ಪಾದಯಾತ್ರೆ ಮಾಡುವಾಗ ಸಂಘಟನೆಗಳು ಎಲ್ಲಿ ಹೋಗಿದ್ವು?’
ಅನುದಾನ ಕೊರತೆಯಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂದು ದೆಹಲಿಯ ಕರ್ನಾಟಕ ಭವನದಲ್ಲಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಸಮನ್ವಯ) ವಂದನಾ ಗುರ್ನಾನಿ ಅವರಿಗೆ ಆರ್ಥಿಕ ಇಲಾಖೆಯ ಕಾರ್ಯದರ್ಶಿಯಾಗಿದ್ದ (ಆಯವ್ಯಯ ಮತ್ತು ಸಂಪನ್ಮೂಲ) ಏಕ್ ರೂಪ್ ಕೌರ್ ಪತ್ರ ಬರೆದಿದ್ದರು. ಕೌರ್ ಬರೆದಿದ್ದ ಪತ್ರದಲ್ಲಿ ಉಲ್ಲೇಖಿಸಿದ್ದ ಇಲಾಖೆಗಳ ಮುಖ್ಯಸ್ಥರಿಗೆ ಮರು ಪತ್ರ ಬರೆದಿದ್ದ ಗುರ್ನಾನಿ, ಈ ಕುರಿತು ಫಾಲೋ ಅಪ್ ಮಾಡುವಂತೆ ಹೇಳಿದ್ದರು ಎಂದು ವರದಿ ತಿಳಿಸಿದೆ.
ಕೃಷಿ, ಸಹಕಾರ, ಅರಣ್ಯ, ಆರೋಗ್ಯ, ವಸತಿ, ಕಂದಾಯ, ಗೃಹ, ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ, ನಾಗರಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿ 23 ಇಲಾಖೆಗಳ 61 ಯೋಜನೆಗಳಿಗೆ ಅನುದಾನ ದೊರೆತಿಲ್ಲ ಎಂದು ವರದಿ ಹೇಳಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.