ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೆ ಟಿಕೆಟ್ ನೀಡಿ ಎಂದು ಮುಸ್ಲಿಂ ಸಮುದಾಯದ ನಾಯಕರು ಸಿದ್ದರಾಮಯ್ಯರನ್ನು ಒತ್ತಾಯಿಸಿದರು.
ಶಿವಾನಂದ ವೃತ್ತದ ಸಮೀಪವಿರುವ ಸರ್ಕಾರಿ ನಿವಾಸಕ್ಕೆ ಆಗಮಿಸಿದ ನಾಯಕರು ಭೇಟಿಯಾಗಿ ಚರ್ಚಿಸಿದರು. ಪುಲಿಕೇಶಿ ನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ಸಿಕ್ಕಿಲ್ಲ. ಯಾವುದೇ ಕಾರಣಕ್ಕೂ ಟಿಕೆಟ್ ಮಿಸ್ ಆಗಬಾರದು ಎಂದು ಆಗ್ರಹಿಸಿರುವ ಮುಸ್ಲಿಂ ಸಮುದಾಯದ ನಾಯಕರು, ಮೌಲ್ವಿಗಳಿಂದ ಒತ್ತಡ ಹೇರುವ ಯತ್ನ ನಡೆಸಿದ್ದಾರೆ. ಕಳೆದ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಅಖಂಡ ಶ್ರೀನಿವಾಸ್ ಮೂರ್ತಿಗೆ ಸಿದ್ದರಾಮಯ್ಯ ಬಣದ ಬೆಂಬಲ ಇದೆ.
124 ಕ್ಷೇತ್ರಗಳ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ನಿನ್ನೆ ಪ್ರಕಟಿಸಿದೆ.ಮೊದಲ ಪಟ್ಟಿಯಲ್ಲಿ ಪ್ರಕಟವಾಗಿರುವ 124 ಕೈ ಅಭ್ಯರ್ಥಿಗಳಿಗೆ ಸ್ಕ್ರೀನಿಂಗ್ ಕಮಿಟಿ ಬುಲಾವ್ ನೀಡಿದೆ. ನಾಳೆ 124 ಕಾಂಗ್ರೆಸ್ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಲು ಸಮಿತಿ ತೀರ್ಮಾನಿಸಿದೆ. ಅಭ್ಯರ್ಥಿಗಳ ಜತೆ ಸಭೆ ನಡೆಸಲಿರುವ ಸ್ಕ್ರೀನಿಂಗ್ ಕಮಿಟಿ ಪ್ರಚಾರ, ರಣತಂತ್ರಗಳ ಬಗ್ಗೆ ಚರ್ಚಿಸಲಿದೆ ಎಂದು ತಿಳಿದು ಬಂದಿದೆ.