ಮಂಗಳೂರು: ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಏನೆಲ್ಲ ಮಾಡುತ್ತೇನೆ ಹೇಳಿದ್ದಾರೋ ಅದು ಆಗಿಲ್ಲ, ದಕ್ಷಿಣ ಕನ್ನಡ ಜಿಲ್ಲೆಗೆ ಕುಚಲಕ್ಕಿ ತರಲು ಯೋಗ್ಯತೆ ಇಲ್ಲದ ಇವರು ಜನಪ್ರತಿನಿಧಿಗಳಾ? ಎಂದು ವಿಪಕ್ಷ ಉಪನಾಯಕ ಯು.ಟಿ. ಖಾದರ್ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರಿಗೆ ಅಭಿವೃದ್ಧಿ ಮಾಡುವ ಯೋಗ್ಯತೆ ಇಲ್ಲ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರದ ಫ್ಯೂಲ್ ಕಮ್ಯೂನಲ್ ಫ್ಯೂಲ್ ಆಗಿದ್ದು, ಅವರ ಸೈಲೆನ್ಸರ್ ಹೊಗೆ ವಿಷ, ಅದು ಯಾರನ್ನೂ ಬದುಕಿಸಲ್ಲ ಎಂದು ವಾಗ್ದಾಳಿ ನಡೆಸಿದರು.
ಇನ್ನೂ ಮುಂದೆ ಇವರ ಇಂಜಿನ್‌ನನ್ನು ಜನ ಕಿತ್ತು ಬಿಸಾಡ್ತಾರೆ. ಬಿಜೆಪಿ ಅವರು ಜಾತಿ, ಧರ್ಮ ಆಧಾರದಲ್ಲಿ ವಿಭಾಗ ಮಾಡುವವರು. ಬಿರುಕು ಮೂಡಿಸಲು ಇವರು ಇದನ್ನೆಲ್ಲಾ ಮಾಡುತ್ತಿದ್ದಾರೆ. ನಿನ್ನೆ ನಳಿನ್ ಕುಮಾರ್ ಕಟೀಲ್ ಸಿಕ್ಕಿದಾಗ ಚಾಲೆಂಜ್ ಹಾಕಿದ್ದೇನೆ. ರಮಾನಾಥ್ ರೈ ಗೆದ್ದು ಉಸ್ತುವಾರಿ ಸಚಿವರಾಗುತ್ತಾರೆ. ನಮ್ಮದೇ ಸರ್ಕಾರ ಬರುತ್ತೆ ಅಂತ ಹೇಳಿದ್ದೇನೆ. ನಾನು ಸಚಿವ ಆದಾಗಲೂ ಸೂಟ್ ಹಾಕಿಲ್ಲ, ಇನ್ನೂ ಹಾಕಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರ ಆರ್ಥಿಕವಾಗಿ ದಾರಿದ್ರ್ಯದ ಪರಿಸ್ಥಿತಿಗೆ ಬಂದಿದೆ. ಅಬ್ಬಕ್ಕ ಉತ್ಸವಕ್ಕೆ ಪ್ರತಿವರ್ಷ 50 ಲಕ್ಷ ರೂ. ಬಿಡುಗಡೆಯಾಗುತ್ತಿತ್ತು. ಆದರೆ ಈ ಸಲ ಸುನೀಲ್ ಕುಮಾರ್ ಕನ್ನಡ, ಸಂಸ್ಕೃತಿ ಸಚಿವರಾಗಿದ್ದಾರೆ. ಈ ಬಾರಿಯ ಅಬ್ಬಕ್ಕ ಉತ್ಸವಕ್ಕೆ ಬರೀ ಹತ್ತು ಲಕ್ಷ ರೂ ಕೊಟ್ಟಿದ್ದಾರೆ. ಇದು ದೇಶಕ್ಕಾಗಿ ತ್ಯಾಗ ಮಾಡಿದ ವೀರರಾಣಿ ಅಬ್ಬಕ್ಕನಿಗೆ ಮಾಡಿದ ಅವಮಾನ ಎಂದು ಕಿಡಿಕಾರಿದರು.