Friday, September 29, 2023
spot_img
- Advertisement -spot_img

ವಿ.ಶ್ರೀನಿವಾಸ್ ಪ್ರಸಾದ್ ಸಂಪೂರ್ಣ ಮಾಹಿತಿ

ವಿ.ಶ್ರೀನಿವಾಸ್ ಪ್ರಸಾದ್ ರಾಜ್ಯದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು. ಚಾಮರಾಜನಗರ ಎಸ್.ಸಿ ಮೀಸಲು ಲೋಕಸಭಾ ಕ್ಷೇತ್ರದಿಂದ ಒಟ್ಟು 6 ಬಾರಿ ಸಂಸದರಾಗಿ, ನಂಜನಗೂಡು ಎಸ್.ಸಿ ಮೀಸಲು ವಿಧಾನಸಭಾ ಕ್ಷೇತ್ರದಿಂದ 2 ಬಾರಿ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಬಾಲ್ಯ-ಶಿಕ್ಷಣ : ವಿ.ಶ್ರೀನಿವಾಸ್ ಪ್ರಸಾದ್ 6 ಆಗಸ್ಟ್ 1947ರಲ್ಲಿ ಎಂ.ವೆಂಕಯ್ಯ ಮತ್ತು ಭಾಗ್ಯಲಕ್ಷ್ಮಿ ದಂಪತಿಯ ಮಗನಾಗಿ ಮೈಸೂರಿನ ಅಶೋಕಪುರಂ ಜನಿಸಿದರು. ಶ್ರೀನಿವಾಸ್ ಪ್ರಸಾದ್ ಅವರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಅಶೋಕಪುರಂ ಪಕ್ಕದಲ್ಲಿರುವ ಕೃಷ್ಣಮೂರ್ತಿ ಪುರಂನ ಶಾರದಾ ವಿಲಾಸ ಶಾಲೆಯಲ್ಲಿ ಪೂರೈಸಿ, ಶಾರದಾ ವಿಲಾಸ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪಿಯು ಮತ್ತು ಬಿಎಸ್ಸಿ ಪದವಿ ಪಡೆದರು. ಬಳಿಕ ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ ಎಂ.ಎ (ರಾಜಕೀಯ ಶಾಸ್ತ್ರ) ಶಿಕ್ಷಣ ಪೂರೈಸಿದರು.

ರಾಜಕೀಯ ಜೀವನ : 1977ರಲ್ಲಿ ಜನತಾ ಪಕ್ಷದ ಮೂಲಕ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಶ್ರೀನಿವಾಸ ಪ್ರಸಾದ್, ಇದುವರೆಗೆ ಸ್ಪರ್ಧಿಸಿದ 14 ಚುನಾವಣೆಗಳಲ್ಲಿ ಒಟ್ಟು 11 ಚುನಾವಣೆಗಳಲ್ಲಿ ಜಯಗಳಿಸಿದ ಖ್ಯಾತಿ ಹೊಂದಿದ್ದಾರೆ. ಅಂದು ಮೈಸೂರು ಜಿಲ್ಲೆಗೆ ಒಳಪಟ್ಟಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಸತತವಾಗಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಜಯ ಕಂಡು ಕೊಂಡಿದ್ದ ವಿ‌. ಶ್ರೀನಿವಾಸ್ ಪ್ರಸಾದ್, 2008 ಹಾಗು 2013ರ ವಿಧಾನಸಭೆ ಚುನಾವಣೆಯಲ್ಲಿ ನಂಜನಗೂಡು ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ 2 ಬಾರಿ ಶಾಸಕರಾಗಿ ಆಯ್ಕೆಯಾದರು.

ಕಾಂಗ್ರೆಸ್ ಕಟ್ಟಾಳುವಾಗಿದ್ದ ಶ್ರೀನಿವಾಸ್ ಪ್ರಸಾದ್ 1999 ರಲ್ಲಿ ಸಂಯುಕ್ತ ಜನತಾದಳದ ಅಭ್ಯರ್ಥಿಯಾಗಿ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿ ಅಂದು ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟಗಳಲ್ಲಿ ಆಹಾರ ಖಾತೆ ಸಚಿವರಾಗಿದ್ದರು.

ಬಳಿಕ ಕಾಂಗ್ರೆಸ್ ಗೆ ಹಿಂತಿರುಗಿದ್ದ ವಿ.ಶ್ರೀನಿವಾಸ್ ಪ್ರಸಾದ್ 2013ರಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಕಂದಾಯ ಹಾಗು ಮುಜರಾಯಿ ಇಲಾಖೆ ಸಚಿವರಾಗಿ 3 ವರ್ಷಗಳ ಕಾಲ ಸೇವೆ ಸಲ್ಲಿಸಿದರು‌.

ನಂತರ ಸಚಿವ ಸ್ಥಾನದಿಂದ ಅವರನ್ನು ಕೈ ಬಿಟ್ಟಾಗ ಸಿಎಂ ಸಿದ್ದರಾಮಯ್ಯ ವಿರುದ್ದ ಮುನಿಸಿಕೊಂಡು ಡಿಸೆಂಬರ್ 2016ರಲ್ಲಿ ಬಿಜೆಪಿ ಸೇರ್ಪಡೆಯಾದರು. ಸದ್ಯ, ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ವಿ.ಶ್ರೀನಿವಾಸ್ ಪ್ರಸಾದ್, 2020ರಲ್ಲಿ ನಡೆದ ಸಮಾರಂಭದಲ್ಲಿ ನಾನು 2024ರ ನನ್ನ ಸಂಸದ ಸ್ಥಾನದ ಅವಧಿ ಮುಗಿದ ಬಳಿಕ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.

ವಿ.ಶ್ರೀನಿವಾಸ್ ಪ್ರಸಾದ್ ರಾಜಕೀಯ ಮಾತ್ರವಲ್ಲದೆ ಇತರ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಕೊಂಡಿದ್ದಾರೆ.
ಮೈಸೂರಿನ ಸಿದ್ದಾರ್ಥ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷ, ಮೈಸೂರಿನ ಪ್ರಾಥಮಿಕ ಶಾಲಾ ಉತ್ತಮ ಸಮಿತಿ‌ಯ ಸದಸ್ಯರಾಗಿದ್ದಾರೆ. ಕೇಂದ್ರ ರೇಷ್ಮೆ ಮಂಡಳಿ ಹಾಗು ಕರ್ನಾಟಕ ಕಾಂಗ್ರೆಸ್ ಚು‌ನಾವಣಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles